ಬಾಲಿವುಡ್‌ನ ಜನಪ್ರಿಯ ನಟಿ ಮೌನಿ ರಾಯ್ ಅವರು ಸಾರ್ವಜನಿಕ ಸಮಾರಂಭವೊಂದರಲ್ಲಿ ತಮಗಾದ ಅತ್ಯಂತ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಕೆಲವು ವ್ಯಕ್ತಿಗಳು ನಟಿಯೊಂದಿಗೆ ವಿಕೃತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿರುವ ಅವರು, ಸಾರ್ವಜನಿಕವಾಗಿ ಮಹಿಳೆಯರಿಗೆ ಮತ್ತು ನಟಿಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕಣ್ಣೀರಕ್ಕಿದ್ದಾರೆ.
ಕಿರುಕುಳವು ಅವರು ವೇದಿಕೆಯನ್ನು ತಲುಪುವ ಮೊದಲೇ ಪ್ರಾರಂಭವಾಗಿತ್ತು. ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮಿಸಿ ವೇದಿಕೆಯ ಕಡೆಗೆ ನಡೆಯುತ್ತಿರುವಾಗ, ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಅನೇಕ ಪುರುಷರು ನನ್ನ ಸೊಂಟದ ಮೇಲೆ ಕೈ ಹಾಕಿದರು. ಅದರಲ್ಲೂ ವಯಸ್ಸಾದ ಪುರುಷರ ವರ್ತನೆಯಿಂದ ನನಗೆ ತುಂಬಾ ಅಸಹ್ಯವಾಯಿತು. ನಾನು ಆಕ್ಷೇಪ ವ್ಯಕ್ತಪಡಿಸಿ ಕೈ ತೆಗೆಯುವಂತೆ ಕೇಳಿಕೊಂಡರೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ ಎಂದು ಮೌನಿ ಬೇಸರ ವ್ಯಕ್ತಪಡಿಸಿದ್ದಾರೆ.
ಮೌನಿ ರಾಯ್ ಅವರು ವೇದಿಕೆ ಮೇಲೆ ನಿಂತು ಪ್ರದರ್ಶನ ನೀಡಲು ಆರಂಭಿಸಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ವೇದಿಕೆ ಎತ್ತರದಲ್ಲಿತ್ತು, ಮುಂದಿನ ಸಾಲಿನಲ್ಲಿ ಕುಳಿತಿದ್ದ ಕೆಲವು ಅಂಕಲ್‌ಗಳು ಕೆಳಗಿನಿಂದ ಅಶ್ಲೀಲವಾಗಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರು. ಇದನ್ನು ತಡೆಯಲು ಬಂದ ಭದ್ರತಾ ಸಿಬ್ಬಂದಿಯ ಮೇಲೆಯೇ ಅವರು ದರ್ಪ ತೋರಿಸಿದ್ದಾರೆ. ಜೊತೆಗೆ ಮುಂದಿನ ಸಾಲಿನಲ್ಲಿ ನಿಂತಿದ್ದ ಇಬ್ಬರು ಪುರುಷರು ಅಶ್ಲೀಲ ಸನ್ನೆಗಳನ್ನು ಮಾಡುತ್ತಾ ಕೆಟ್ಟದಾಗಿ ವರ್ತಿಸಿ ನನ್ನನ್ನ ನಿಂದಿಸುತ್ತಿದ್ದರು ಎಂದು ನಟಿ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನು ನನ್ನ ದೇಶ ಮತ್ತು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ವಧು-ವರರನ್ನು ಹರಸಲು ಅತಿಥಿಯಾಗಿ ಹೋಗಿದ್ದ ನನಗೆ ಇಂತಹ ಕಿರುಕುಳ ನೀಡಿದರೆ ಹೇಗೆ ? ನನ್ನಂತಹ ಹಿರಿಯ ನಟಿಯರಿಗೇ ಈ ಪರಿಸ್ಥಿತಿ ಎದುರಾದರೆ, ಈಗಷ್ಟೇ ಚಿತ್ರರಂಗಕ್ಕೆ ಬಂದಿರುವ ಯುವ ನಟಿಯರ ಪಾಡು ಏನಾಗಬೇಡ ? ಅವರ ಮನೆಯ ಹೆಣ್ಣುಮಕ್ಕಳ ಜೊತೆ ಯಾರಾದರೂ ಹೀಗೆಯೇ ವರ್ತಿಸಿದರೆ ಅವರು ಸಹಿಸುತ್ತಾರೆಯೇ ? ಎಂದು ಮೌನಿ ರಾಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತಿಥಿಗಳಾಗಿ ಬರುವ ಕಲಾವಿದರ ಗೌರವ ಕಾಪಾಡುವುದು ಆಯೋಜಕರ ಜವಾಬ್ದಾರಿ ಎಂದು ಅವರು ಒತ್ತಿ ಹೇಳಿದ್ದಾರೆ.
ಮೌನಿ ರಾಯ್ ಕೊನೆಯದಾಗಿ ದಿ ಭೂತ್ನಿ ಮತ್ತು ಸ್ಪೈ ಥ್ರಿಲ್ಲರ್ ಸಲಾಕಾರ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಅವರ ಈ ಸಾಮಾಜಿಕ ಜಾಲತಾಣದ ಪೋಸ್ಟ್ ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.
