ಕಾರವಾರ: ರಾಜ್ಯದಲ್ಲಿ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಅಭಾವ ತೀವ್ರಗೊಳ್ಳುತ್ತಿದ್ದಂತೆ, ಜನಸಾಮಾನ್ಯರು ಮತ್ತೆ ಸಾಂಪ್ರದಾಯಿಕ ಒಲೆ ಹಾಗೂ ಕಟ್ಟಿಗೆಯ ಮೊರೆ ಹೋಗುತ್ತಿದ್ದಾರೆ. ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಟ್ಟಿಗೆಗೆ ಹಿಂದೆಂದೂ ಇಲ್ಲದ ಬೇಡಿಕೆ ಸೃಷ್ಟಿಯಾಗಿದ್ದು, ಜಿಲ್ಲೆಯ ಬಹುತೇಕ ಅರಣ್ಯ ಇಲಾಖೆಯ ಡಿಪೋಗಳಲ್ಲಿ ಸಂಗ್ರಹವಿದ್ದ ಕಟ್ಟಿಗೆ ಖಾಲಿಯಾಗಿದೆ. ಈ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅರಣ್ಯ ಇಲಾಖೆಯು ಜಿಲ್ಲೆಯ ಹೊನ್ನಾವರ ವಿಭಾಗದಲ್ಲಿ 3 ಲಕ್ಷ ಅಕೇಶಿಯಾ ಮರಗಳ ಕಟಾವಿಗೆ ಅಧಿಕೃತ ಅನುಮತಿ ನೀಡಿದೆ.
35% ಹೆಚ್ಚಾದ ಬೇಡಿಕೆ
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಸಮೃದ್ಧವಾಗಿದ್ದರೂ, ಕಾಡಿನಿಂದ ಕಟ್ಟಿಗೆ ತರುವುದಕ್ಕೆ ಇಲಾಖೆಯ ಕಠಿಣ ನಿರ್ಬಂಧಗಳಿವೆ. ಹೀಗಾಗಿ ಜನರು ಸರ್ಕಾರಿ ಡಿಪೋಗಳನ್ನೇ ನೆಚ್ಚಿಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಹೊಸದಾಗಿ ಮರಗಳನ್ನು ಕಡಿಯಲು ಅನುಮತಿ ಇರಲಿಲ್ಲ, ಇದರಿಂದಾಗಿ ಹಳೆಯ ಸಂಗ್ರಹವನ್ನೇ ಮಾರಾಟ ಮಾಡಲಾಗುತ್ತಿತ್ತು. ಆದರೆ, ಈ ವರ್ಷದ ಮಾರ್ಚ್ ತಿಂಗಳ ಆರಂಭದಿಂದಲೇ ಕಟ್ಟಿಗೆಯ ಬೇಡಿಕೆಯಲ್ಲಿ ಶೇ. 35ಕ್ಕಿಂತಲೂ ಹೆಚ್ಚು ಏರಿಕೆ ಕಂಡುಬಂದಿದೆ.
ಹೊನ್ನಾವರ ಅರಣ್ಯ ವಿಭಾಗದ ವ್ಯಾಪ್ತಿಯಲ್ಲಿರುವ ಒಟ್ಟು 28 ಡಿಪೋಗಳ ಪೈಕಿ ಈಗಾಗಲೇ 8 ಡಿಪೋಗಳು ಸಂಪೂರ್ಣ ಖಾಲಿಯಾಗಿವೆ. ಉಳಿದ 20 ಡಿಪೋಗಳಲ್ಲಿರುವ ಅಲ್ಪಸ್ವಲ್ಪ ಸಂಗ್ರಹವೂ ಕೆಲವೇ ದಿನಗಳಲ್ಲಿ ಮುಗಿಯುವ ಹಂತ ತಲುಪಿದೆ.
ಜನರ ಸಂಕಷ್ಟವನ್ನು ಗಮನಿಸಿದ ಅರಣ್ಯ ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅಕೇಶಿಯಾ ನಡುತೋಪುಗಳಲ್ಲಿ ಮರಗಳನ್ನು ಕಡಿಯಲು ಅನುಮತಿ ಕೋರಿತ್ತು. ಈ ಮನವಿಗೆ ಸ್ಪಂದಿಸಿರುವ ಇಲಾಖೆಯು 3 ಲಕ್ಷ ಮರಗಳ ಕಟಾವಿಗೆ ಹಸಿರು ನಿಶಾನೆ ತೋರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಹೊನ್ನಾವರ ವಿಭಾಗದ ಡಿ.ಎಫ್.ಓ (DFO) ಯೋಗೀಶ್ ಅವರು, ಈಗಾಗಲೇ ಹೊನ್ನಾವರ ವಿಭಾಗದ ವ್ಯಾಪ್ತಿಯ ನಡುತೋಪುಗಳಲ್ಲಿ ಮರಗಳ ಕಡಿತ ಕಾರ್ಯ ಆರಂಭವಾಗಿದೆ. ಶೀಘ್ರದಲ್ಲೇ ಎಲ್ಲಾ ಡಿಪೋಗಳಿಗೆ ಕಟ್ಟಿಗೆ ಸರಬರಾಜು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಯಾಕೆ ಈ ಪರಿಸ್ಥಿತಿ ?
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪೂರೈಕೆಯ ವ್ಯತ್ಯಯದಿಂದಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಲಭ್ಯತೆ ಕಡಿಮೆಯಾಗಿದೆ. ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶದ ಜನರೂ ಕೂಡ ಪರ್ಯಾಯ ವ್ಯವಸ್ಥೆಯಾಗಿ ಕಟ್ಟಿಗೆಯನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಮಳೆಗಾಲ ಹತ್ತಿರ ಬರುತ್ತಿರುವುದರಿಂದ ಜನರು ಈಗಲೇ ಹೆಚ್ಚಿನ ಪ್ರಮಾಣದ ಕಟ್ಟಿಗೆ ಖರೀದಿಗೆ ಮುಂದಾಗಿರುವುದು ಡಿಪೋಗಳ ಮೇಲೆ ಒತ್ತಡ ಹೆಚ್ಚಿಸಿದೆ.





