ಸುಮಾರು 120 ಅಡಿ ಎತ್ತರದ ವಿದ್ಯುತ್ ಟವರ್ ಏರಿದ ಭೂಪ!: ರೈತನನ್ನು ರಕ್ಷಿಸಿದ ಪೊಲೀಸರು

Untitled design 2026 02 26T114805.502

ತುಮಕೂರು, ಫೆ. 26 – ಸಾಲದ ಬಾಧೆ ತಾಳಲಾರದೇ ರೈತನೊಬ್ಬ 120 ಅಡಿ ಎತ್ತರದ ಹೈಟೆನ್ಶನ್ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. 

ಬಿ.ಕೆ ಹಳ್ಳಿ ಗ್ರಾಮದ 53 ವರ್ಷದ ಗೋಪಾಲ್ ಎಂಬ ರೈತ ಈ ಅತ್ಮಹತ್ಯೆಗೆ ಮುಂದಾದ ವ್ಯಕ್ತಿ ಎಂದು ತಿಳಿದುಬಂದಿದೆ. ಕುಟುಂಬದ ಆರ್ಥಿಕ ಸಂಕಷ್ಟ ಹಾಗೂ ಸಾಲದ ಒತ್ತಡದಿಂದ ಮಾನಸಿಕವಾಗಿ ಕುಗ್ಗಿದ್ದ ಗೋಪಾಲ್, ಮದ್ಯ ಸೇವಿಸಿದ ಸ್ಥಿತಿಯಲ್ಲಿ 400 ಕೆವಿ ಸಾಮರ್ಥ್ಯದ ಹೈಟೆನ್ಶನ್ ಟವರ್ ಏರಿ ಸುಮಾರು 120 ಅಡಿ ಎತ್ತರದಲ್ಲಿ ಕುಳಿತುಕೊಂಡಿದ್ದರು

ಈ ದೃಶ್ಯವನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ತಕ್ಷಣ ತಿರುಮಣಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳದಲ್ಲಿದ್ದ ಅಧಿಕಾರಿಗಳು ಗೋಪಾಲ್ ಅವರನ್ನು ಸಮಾಧಾನಪಡಿಸಲು ನಿರಂತರವಾಗಿ ಮನವಿ ಮಾಡಿಕೊಂಡಿದ್ದಾರೆ. “ಯೋ… ಬಾರಯ್ಯ ಕೆಳಗೆ, ಏನೂ ಆಗಲ್ಲ” ಎಂದು ಮಾತನಾಡುತ್ತಾ ಮನವೊಲಿಸಲು ಪ್ರಯತ್ನಿಸಿದ್ದಾರೆ..

ಆದರೆ, ಟವರ್ ಮೇಲೆ ಹತ್ತಿದ ಗೋಪಾಲ್ ಅವರಿಗೆ ಕೆಳಗಿಳಿಯುವುದೇ ಕಷ್ಟಕರವಾಗಿತ್ತು.. ಈ ವೇಳೆ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಹಗ್ಗ, ಹಾರ್ನೆಸ್ ಬೆಲ್ಟ್, ಲ್ಯಾಡರ್ ಸೇರಿದಂತೆ ವಿಶೇಷ ರಕ್ಷಣಾ ಉಪಕರಣಗಳನ್ನು ಬಳಸಿ, ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಲಾಯಿತು.

ಸುಮಾರು ಮೂರು ಗಂಟೆಗಳ ಕಾಲ ನಡೆದ ಸಾಹಸಮಯ ಕಾರ್ಯಾಚರಣೆಯ ಬಳಿಕ ಗೋಪಾಲ್ ಅವರನ್ನು ಯಾವುದೇ ಅನಾಹುತವಾಗದಂತೆ ಜೀವಂತವಾಗಿ ಕೆಳಗಿಳಿಸಿ ರಕ್ಷಿಸಲಾಯಿತು. ಸ್ಥಳದಲ್ಲಿದ್ದ ಗ್ರಾಮಸ್ಥರು ಕೂಡ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣೆ ಬಳಿಕ ಮಾತನಾಡಿದ ಗೋಪಾಲ್, ತಾನು ಸುಮಾರು 6 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ತನ್ನ ಜಮೀನಿಗೆ ಬೋರ್‌ವೆಲ್ ತೋಡಿಸಲು ಮತ್ತು ಮಗಳ ಮದುವೆ ನೆರವೇರಿಸಲು ಹಣಕಾಸು ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾಗಿ ಹೇಳಿದ್ದಾರೆ. ಆದರೆ, ಸಾಲಗಾರರ ಒತ್ತಡ ಹಾಗೂ ಹಣ ವಾಪಾಸ್ ನೀಡಲು ಆಗದ ಪರಿಸ್ಥಿತಿ ಮನಸ್ಸಿಗೆ ತುಂಬಾ ನೋವುಂಟುಮಾಡಿತ್ತು ಎಂದು ವಿವರಿಸಿದರು.

“ಸಾಲದ ಕಾಟ ಹೆಚ್ಚಾಗಿ ಮನಸ್ಸು ಕೆಲಸ ಮಾಡಲಿಲ್ಲ. ಅದಕ್ಕಾಗಿ ಈ ತಪ್ಪು ನಿರ್ಧಾರ ತೆಗೆದುಕೊಂಡೆ,” ಎಂದು ಗೋಪಾಲ್ ವಿಷಾದ ವ್ಯಕ್ತಪಡಿಸಿದ್ದಾರೆ. ಸದ್ಯ ಗೋಪಾಲ್ ಅವರನ್ನು ಪೊಲೀಸರು ಸುರಕ್ಷಿತವಾಗಿ ಕುಟುಂಬದವರ ವಶಕ್ಕೆ ಒಪ್ಪಿಸಿದ್ದಾರೆ.

Exit mobile version