ಬೆಂಗಳೂರು: ದೇಶದ ಅನೇಕ ಮನೆಗಳ ಅಡುಗೆಮನೆಯಲ್ಲಿ ಸ್ಥಾನ ಪಡೆದಿರುವ ‘ಪ್ರೆಸ್ಟೀಜ್’ ಕುಕ್ಕರ್ ತಯಾರಕ ಸಂಸ್ಥೆ ಟಿಟಿಕೆ ಪ್ರೆಸ್ಟೀಜ್‌ನ ಅಧ್ಯಕ್ಷ ಟಿ.ಟಿ. ಜಗನ್ನಾಥನ್ (77) ಅವರು ಬೆಂಗಳೂರಿನಲ್ಲಿ ನಿಧನರಾದರು.
ಟಿ.ಟಿ. ಜಗನ್ನಾಥನ್ ಅವರು ಸುಮಾರು 50 ವರ್ಷಗಳ ಕಾಲ ಟಿಟಿಕೆ ಪ್ರೆಸ್ಟೀಜ್‌ನ ಬೋರ್ಡ್ ಸದಸ್ಯರಾಗಿದ್ದರು. 1975ರಲ್ಲಿ ಕಂಪನಿಯ ಮಂಡಳಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಸೇರಿದ ಅವರು, 2000ರಲ್ಲಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡು 2019ರ ವರೆಗೆ ಆ ಪದವಿಯಲ್ಲಿ ಕಾರ್ಯನಿರ್ವಹಿಸಿದರು. ನಂತರ ಅಧ್ಯಕ್ಷರಾದ ಅವರು ಈ ವರ್ಷ ಮಾರ್ಚ್ 25ರಂದು ಆ ಸ್ಥಾನವನ್ನು ತೊರೆದಿದ್ದರು. ಒಮ್ಮೆ ದಿವಾಳಿಯಾಗಿದ್ದ ಕಂಪನಿಯನ್ನು ಸಾಲಮುಕ್ತವನ್ನಾಗಿ ಮಾಡಿ, ಸಣ್ಣ ಉಪಕರಣಗಳ ಉದ್ಯಮದಲ್ಲಿ ಮುಂಚೂಣಿಗೆ ತಂದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ .
ಜಗನ್ನಾಥನ್ ಅವರು ಅಡುಗೆ ಮಾಡುವುದನ್ನು ಬಲು ಇಷ್ಟಪಡುತ್ತಿದ್ದರು ಮತ್ತು ಅಡುಗೆ ಮನೆಜಗತ್ತಿನ ದೊರೆ ಎಂದೇ ಖ್ಯಾತರಾಗಿದ್ದರು. ನಿಮಗೆ ಅಡುಗೆ ಮಾಡಲು ಬರದಿದ್ದರೆ, ನೀವು ಆ ಕ್ಷೇತ್ರದಲ್ಲೇ ಇಲ್ಲ ಎಂಬುದು ಅವರ ನಿಲುವಾಗಿತ್ತು. ಚೆನ್ನೈ ಐಐಟಿಯಿಂದ ಚಿನ್ನದ ಪದಕದೊಂದಿಗೆ ಉತ್ತೀರ್ಣರಾಗಿ, ಅಮೆರಿಕದ ಕಾರ್ನೆಲ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದರು . ಕಂಪನಿಯ ಯಶಸ್ಸಿನ ಕಥೆಯನ್ನು ಡಿಸ್ರಪ್ಟ್ ಆ್ಯಂಡ್ ಕಾಂಕರ್ – ಹೌ ಟಿಟಿಕೆ ಪ್ರೆಸ್ಟೀಜ್ ಬಿಕೇಮ್ ಎ ಬಿಲಿಯನ್ ಡಾಲರ್ ಕಂಪನಿ ಎಂಬ ಪುಸ್ತಕದಲ್ಲಿ ಅವರು ವಿವರಿಸಿದ್ದಾರೆ.
1928ರಲ್ಲಿ ಮಾಜಿ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ಸ್ಥಾಪಿಸಿದ ಟಿಟಿಕೆ ಗ್ರೂಪ್‌ನ ಮೊಮ್ಮಗನಾದ ಜಗನ್ನಾಥನ್ ಅವರ ಅಗಲಿಕೆಯಿಂದ ಸಂಸ್ಥೆಗೆ ಭರಿಸಲಾರದ ನಷ್ಟ ಸಂಭವಿಸಿದೆ.