ನವದೆಹಲಿ: ವಾರದಲ್ಲಿ ಕೇವಲ ಐದು ದಿನಗಳ ಕೆಲಸದ ಅವಧಿಗೆ ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿರುವುದರಿಂದ, ಇಂದು ಅಂದರೆ ಜನವರಿ 27ರ ಮಂಗಳವಾರದಂದು ದೇಶಾದ್ಯಂತ ಸಾರ್ವಜನಿಕ ವಲಯದ ಬ್ಯಾಂಕುಗಳ ಕಾರ್ಯಾಚರಣೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಮುಷ್ಕರಕ್ಕೆ ಕಾರಣವೇನು?
ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ಈ ಮುಷ್ಕರ ನಡೆಯುತ್ತಿದೆ. ಬ್ಯಾಂಕ್ ಉದ್ಯೋಗಿಗಳಿಗೆ ಶನಿವಾರ ಮತ್ತು ಭಾನುವಾರ ಪೂರ್ಣ ರಜೆ ನೀಡಬೇಕು ಹಾಗೂ ವಾರದಲ್ಲಿ 5 ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಬೇಕು ಎಂಬುದು ಇವರ ಪ್ರಮುಖ ಬೇಡಿಕೆಯಾಗಿದೆ. ಈ ವಿಷಯವಾಗಿ ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗೆ ನಡೆದ ಸಂಧಾನ ಸಭೆಯು ಯಾವುದೇ ತೀರ್ಮಾನವಾಗದೇ ಮುಗುದಿತ್ತು. ಹೀಗಾಗಿ, ಉದ್ಯೋಗಿಗಳು ಮುಷ್ಕರದ ಹಾದಿ ಹಿಡಿದಿದ್ದಾರೆ.
ಸತತ ಮೂರನೇ ದಿನ ಬ್ಯಾಂಕ್ ಸೇವೆ ಸ್ಥಗಿತ
ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25 (ಭಾನುವಾರ) ಮತ್ತು ಜನವರಿ 26 (ಸೋಮವಾರ) ಈಗಾಗಲೇ ಬ್ಯಾಂಕುಗಳಿಗೆ ರಜೆ ಇತ್ತು. ಇಂದು ಮುಷ್ಕರ ನಡೆಯುತ್ತಿರುವುದರಿಂದ ಸತತ ಮೂರು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸ್ಥಗಿತಗೊಂಡಂತಾಗುತ್ತದೆ. ಇದರಿಂದ ಚೆಕ್ ಕ್ಲಿಯರೆನ್ಸ್, ನಗದು ಠೇವಣಿ ಮತ್ತು ಸಾಲದ ಪ್ರಕ್ರಿಯೆಗಳಿಗಾಗಿ ಕಾಯುತ್ತಿರುವ ಗ್ರಾಹಕರಿಗೆ ಹೆಚ್ಚಿನ ಅನಾನುಕೂಲತೆ ಉಂಟಾಗಲಿದೆ.
ಯಾವ ಬ್ಯಾಂಕುಗಳ ಮೇಲೆ ಪರಿಣಾಮ?
ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾಗಳಲ್ಲಿ ಸೇವೆಗಳು ಲಭ್ಯವಿರುವುದಿಲ್ಲ. ನಗದು ಹಿಂಪಡೆಯುವಿಕೆ ಮತ್ತು ಕೌಂಟರ್ ಸೇವೆಗಳಿಗೆ ಅಡ್ಡಿಯಾಗಬಹುದು.
ಆದರೆ, ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಾದ HDFC, ICICI ಮತ್ತು Axis ಬ್ಯಾಂಕ್‌ಗಳು ಈ ಒಕ್ಕೂಟದ ಭಾಗವಾಗಿಲ್ಲದ ಕಾರಣ, ಅಲ್ಲಿ ವಹಿವಾಟುಗಳು ಎಂದಿನಂತೆ ನಡೆಯುವ ನಿರೀಕ್ಷೆಯಿದೆ. ಹೀಗಾಗಿ HDFC, ICICI ಮತ್ತು Axis ಬ್ಯಾಂಕ್‌ಗಲ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ.
ಡಿಜಿಟಲ್ ಸೇವೆಗಳು ಲಭ್ಯ
ಬ್ಯಾಂಕ್ ಶಾಖೆಗಳು ಮುಚ್ಚಿದ್ದರೂ, ಗ್ರಾಹಕರು ಆತಂಕಪಡುವ ಅಗತ್ಯವಿಲ್ಲ. ಯುಪಿಐ (UPI), ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮತ್ತು ಎಟಿಎಂ (ATM) ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ತುರ್ತು ಹಣ ವರ್ಗಾವಣೆಗಾಗಿ ಡಿಜಿಟಲ್ ವೇದಿಕೆಗಳನ್ನು ಬಳಸಲು ಬ್ಯಾಂಕ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.
