ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದಾರೆ. ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಯ ಗೋಸಾಯಿ ಗಂಜ್ ಬಳಿ ವೇಗವಾಗಿ ಚಲಿಸುತ್ತಿದ್ದ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಎದುರಾಗಿದೆ.
ನಿದ್ರೆಗೆ ಜಾರಿದ ಚಾಲಕ
ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕ ಚಾಲನೆ ಮಾಡುವಾಗ ನಿದ್ರೆಗೆ ಜಾರಿದ್ದೇ ಈ ಭೀಕರ ಅಪಘಾತಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಈ ಖಾಸಗಿ ಬಸ್ ಪಂಜಾಬ್‌ನ ಲುಧಿಯಾನದಿಂದ ಬಿಹಾರದ ದರ್ಭಂಗಾಗೆ ತೆರಳುತ್ತಿತ್ತು. ರಾತ್ರಿಯ ಹೊತ್ತು ಎಕ್ಸ್‌ಪ್ರೆಸ್‌ವೇನಲ್ಲಿ ವೇಗವಾಗಿ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆಯ ಬದಿಗೆ ಉರುಳಿದೆ. ಡಿಕ್ಕಿಯ ತೀವ್ರತೆಗೆ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗಿದ್ದ ಪ್ರಯಾಣಿಕರು ಹೊರಬರಲಾರದೆ ಚೀರಾಡುತ್ತಿದ್ದರು.
ತಕ್ಷಣದ ರಕ್ಷಣಾ ಕಾರ್ಯಾಚರಣೆ
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ತುರ್ತು ರಕ್ಷಣಾ ತಂಡಗಳು (SDRF) ಸ್ಥಳಕ್ಕೆ ಧಾವಿಸಿವೆ. ಬಸ್‌ನ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆಯಲು ಗ್ಯಾಸ್ ಕಟರ್‌ಗಳನ್ನು ಬಳಸಲಾಯಿತು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಇನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಘಟನೆಯ ಕುರಿತು ತನಿಖೆ ಮುಂದುವರೆದಿದೆ. ಈ ಮಾರ್ಗದಲ್ಲಿ ಅತಿಯಾದ ವೇಗ ಮತ್ತು ಚಾಲಕರ ಆಯಾಸದಿಂದಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮೃತರ ಕುಟುಂಬಗಳಿಗೆ ಸರ್ಕಾರವು ಪರಿಹಾರ ಘೋಷಿಸುವ ಸಾಧ್ಯತೆಯಿದೆ.
ಹಾಸನದಲ್ಲಿ ಭಯಾನಕ ಅಪಘಾತ: ಹಂಪ್ ಕಾಣಿಸದೆ ಬೈಕ್‌ನಿಂದ ಬಿದ್ದು ಯುವತಿ ಸಾ*ವು
ಹಾಸನ ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದ ದುರಂತ ಅಪಘಾತದಲ್ಲಿ ಓರ್ವ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬಳು ಗಂಭೀರ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಇರುವ ಸ್ಪೀಡ್ ಹಂಪ್‌ಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.
ಮೃತರಾದವರು ಸತ್ಯಮಂಗಲ ಬಡಾವಣೆಯ ರಮ್ಯ (23). ಖಾಸಗಿ ಕಾಲೇಜಿನಲ್ಲಿ MCA ಓದುತ್ತಿದ್ದ ರಮ್ಯ ಹೆಲ್ಮೆಟ್ ಧರಿಸದೆ ಬುಲೆಟ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರೊಂದಿಗೆ ಇದ್ದ ಸ್ವಾತಿ (24) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತದ ವಿವರ
ಹಾಸನ ಹೊರವಲಯದ ಕೈಗಾರಿಕಾ ಪ್ರದೇಶ ಸತ್ಯಮಂಗಲ ಬಡಾವಣೆ ಸಮೀಪದಲ್ಲಿ ನಡೆದ ಘಟನೆ. ರಸ್ತೆಯಲ್ಲಿ ಇದ್ದ ಹಂಪ್ (ಸ್ಪೀಡ್ ಬ್ರೇಕರ್) ಕಾಣದೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಬುಲೆಟ್ ಬೈಕ್ ರೈಡ್ ಮಾಡುತ್ತಿದ್ದ ವೇಳೆ ಸ್ಪೀಡ್ ಹಂಪ್‌ಗೆ ಬೈಕ್ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ರಮ್ಯ ಸ್ಥಳದಲ್ಲೇ ಧಾರುಣ ಸಾವು, ಸ್ವಾತಿ ಗಂಭೀರ ಗಾಯಗೊಂಡಿದ್ದಾರೆ. ಯಾರೂ ಧರಿಸಿರಲಿಲ್ಲ ಎಂದು ಪ್ರಾಥಮಿಕ ಮಾಹಿತಿ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ರಸ್ತೆಯಲ್ಲಿ ಹಂಪ್‌ಗಳು ಸರಿಯಾಗಿ ಗುರುತಿಸದಿರುವುದು ಅಥವಾ ಅವೈಜ್ಞಾನಿಕವಾಗಿ ನಿರ್ಮಿಸಿರುವುದು ಅಪಘಾತಕ್ಕೆ ಕಾರಣ ಎಂದು ಆರೋಪಗಳಿವೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುವ ಪ್ರದೇಶವಾದ್ದರಿಂದ ರಸ್ತೆ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
ಸ್ಥಳೀಯರು ಮತ್ತು ಪೊಲೀಸರು ರಮ್ಯ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಸ್ವಾತಿಯ ಆರೋಗ್ಯ ಸ್ಥಿತಿ ಸುಧಾರಣೆಯ ಕಡೆಗೆ ಇದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಬೈಕ್ ಸವಾರರು ಹೆಲ್ಮೆಟ್ ಧರಿಸುವುದು ಮತ್ತು ರಸ್ತೆಯಲ್ಲಿರುವ ಹಂಪ್‌ಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬ ಸಂದೇಶ ಹೊರಹೊಮ್ಮಿದೆ.
