ಪದ್ಮಭೂಷಣ ಪುರಸ್ಕೃತ, ಕನ್ನಡ ಸಾಹಿತ್ಯದ ದಿಗ್ಗಜ ಕಾದಂಬರಿಕಾರ ಎಸ್ಎಲ್ ಭೈರಪ್ಪನವರು ಇಂದು (ಸೆ. 24, 2025) ನಿಧನರಾದರು. ಅವರ ಕಾದಂಬರಿಗಳು ಕರ್ನಾಟಕ, ಭಾರತ ಮತ್ತು ವಿದೇಶಗಳ ಓದುಗರನ್ನು ಸಾಹಿತ್ಯದತ್ತ ಸೆಳೆದಿವೆ. ‘ಗೃಹಭಂಗ’, ‘ಪರ್ವ’, ‘ನಾಯಿ ನೆರಳು’ ಮುಂತಾದ ಕಾದಂಬರಿಗಳು ಚಲನಚಿತ್ರ, ಧಾರಾವಾಹಿ ಮತ್ತು ನಾಟಕಗಳಾಗಿ ರೂಪಾಂತರಗೊಂಡಿವೆ. ಖ್ಯಾತ ನಿರ್ದೇಶಕರಾದ ಟಿಎನ್ ಸೀತಾರಾಮ್ ಕೂಡ ಭೈರಪ್ಪನವರ ‘ಮತದಾನ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಚಲನಚಿತ್ರವಾಗಿ ರೂಪಿಸಿದ್ದರು. ಈ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರವೂ ಲಭಿಸಿತು. ಭೈರಪ್ಪನವರೊಂದಿಗಿನ ಒಡನಾಟದ ಕುರಿತು ಸ್ಮರಿಸಿದ್ದಾರೆ.
ಭೈರಪ್ಪನವರ ಕಾದಂಬರಿಗಳ ಮೂಲಕ ಪರಿಚಯ
ನನಗೆ ಭೈರಪ್ಪನವರ ಪರಿಚಯ ಮೊದಲು ಅವರ ಕಾದಂಬರಿಗಳ ಮೂಲಕವೇ ಆಯಿತು ಎಂದು ಸೀತಾರಾಮ್ ಹೇಳಿದ್ದಾರೆ. ನಾಯಿ ನೆರಳು ಬಹುಷಃ ನಾನು ಓದಿದ ಅವರ ಮೊದಲ ಕಾದಂಬರಿಯಾಗಿರಬಹುದು.ಆ ಕಾದಂಬರಿಯನ್ನು ಓದಿದ ಬಳಿಕ ಭೈರಪ್ಪನವರ ಇತರ ಕೃತಿಗಳಾದ ಗೃಹಭಂಗ, ಪರ್ವಮತ್ತು ಇತರ ಕಾದಂಬರಿಗಳನ್ನು ಹಲವು ಬಾರಿ ಓದಿದೆ. ಅವರ ಕಾದಂಬರಿಗಳ ಗಟ್ಟಿತನ ಮತ್ತು ಜೀವನದ ಕಟು ಸತ್ಯಗಳನ್ನು ಚಿತ್ರಿಸುವ ರೀತಿ ಅದ್ಭುತವಾಗಿದೆ ಎಂದು ಹೇಳಿದರು.
‘ಮತದಾನ’ ಚಿತ್ರೀಕರಣದ ಕಥೆ
ನಾನು ಮತದಾನ ಚಿತ್ರವನ್ನು ಮಾಡಲು ಯೋಚಿಸಿದಾಗ ಭೈರಪ್ಪನವರಿಗೆ ಫೋನ್ ಮಾಡಿದೆ. ಅವರು ಚಿತ್ರೀಕರಣಕ್ಕೆ ಅನುಮತಿ ನೀಡಿ ಮೈಸೂರಿನ ತಮ್ಮ ಮನೆಗೆ ಆಹ್ವಾನಿಸಿದರು. ಮೈಸೂರಿನ ಭೈರಪ್ಪನವರ ಮನೆಯಲ್ಲಿ ಚರ್ಚೆಗೆ ಕುಳಿತಾಗ, ಹಾಮಾ ನಾಯಕರು ಕೂಡ ಇದ್ದರು. ಮತದಾನ ಕಾದಂಬರಿಯ ಕಥೆ 1950ರ ದಶಕದ್ದಾಗಿತ್ತು. ಆದರೆ ನಾನು ಅದನ್ನು 1970ರ ದಶಕಕ್ಕೆ ಸರಿಹೊಂದಿಸಲು ಅನುಮತಿ ಕೇಳಿದೆ. ಭೈರಪ್ಪನವರು, ನಾನು ಹಕ್ಕು ಕೊಟ್ಟ ಮೇಲೆ ಕತೆ ನಿಮ್ಮದು. ಕತೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಬದಲಾವಣೆ ಮಾಡಿಕೊಳ್ಳಿ ಒಪ್ಪಗೆ ನೀಡಿದ್ದರು.
ಎಸ್‌ಎಲ್ ಭೈರಪ್ಪನವರ ಬದುಕು ಕೊನೆಯಿಲ್ಲದ ‘ಯಾನ’: ಅನಂತ್ ನಾಗ್ ಭಾವುಕ
ಎಸ್‌ಎಲ್ ಭೈರಪ್ಪ ಅವರ ಕಾದಂಬರಿಗಳು ಹಲವು ಪೀಳಿಗೆಯ ಓದುಗರಿಗೆ ಚಿಂತನೆಯ ದಾರಿದೀಪವಾಗಿವೆ. ಈ ನವರಾತ್ರಿ ಸಂದರ್ಭದಲ್ಲಿ ಅವರನ್ನು ಕಳೆದುಕೊಂಡ ದುಃಖವನ್ನು ತಂದಿದೆ ಎಂದು ಹಿರಿಯ ನಟ ಅನಂತ್ ನಾಗ್ ಸಂತಾಪ ಸೂಚಿಸಿದ್ದಾರೆ.
ಭೈರಪ್ಪನವರ ಬದುಕು ಕೊನೆಯಿಲ್ಲದ ಯಾನ ಹಿಮಾಲಯದಷ್ಟು ಎತ್ತರದ ವ್ಯಕ್ತಿತ್ವ. ಅವರ ಕಾದಂಬರಿಗಳು ವಿಜ್ಞಾನಿಗಳಿಗೂ ಯೋಚಿಸಲಾಗದ ಪಾತ್ರಗಳನ್ನು ಸೃಷ್ಟಿಸಿವೆ .ಭೈರಪ್ಪನವರ ನಾಯಿ ನೆರಳು ಕಾದಂಬರಿ ಚಿತ್ರವಾಗಿ ರೂಪಾಂತರಗೊಂಡಾಗ ಅನಂತ್ ನಾಗ್‌ಗೆ ಮುಖ್ಯಪಾತ್ರದಲ್ಲಿ ಅವಕಾಶ ಸಿಕ್ಕಿತ್ತು. “ಅದರಿಂದಲೇ ನನ್ನ ನಟನೆಯ ಜೀವನ ಆರಂಭವಾಯಿತು. ಎಂದು ಅವರು ನೆನಪಿಸಿಕೊಂಡರು. “ಅವರ ಯಾವ ಕಾದಂಬರಿಯನ್ನೂ ಬಿಟ್ಟಿಲ್ಲ. ‘ಯಾನ’ ನನ್ನ ನೆಚ್ಚಿನ ಕೃತಿ. ವಿಶ್ವದಾದ್ಯಂತ ಯಾರೂ ಬರೆಯದಂತಹ ಬಾಹ್ಯಾಕಾಶದ ಕಲ್ಪನೆಯನ್ನು ಅವರು ಸೃಷ್ಟಿಸಿದರು. ಹಿಂದೂ ತತ್ವಶಾಸ್ತ್ರವನ್ನು ಅರಿತವರಿಗೆ ಮಾತ್ರ ಅದರ ಆಳ ಅರ್ಥವಾಗುತ್ತದೆ.
ಒಂದು ಕಾದಂಬರಿಯಲ್ಲಿ ಮಹಿಳೆ-ಪುರುಷ ಪಾತ್ರಗಳ ಸೃಷ್ಟಿ, ಕೊನೆಯಿಲ್ಲದ ಯಾನದ ಕಲ್ಪನೆ. ಇವು ಓದಿದರೆ ರಾತ್ರಿ ನಿದ್ರೆಯೇ ಬರುವುದಿಲ್ಲ. ಆಕಾಶ, ಪೃಥ್ವಿ, ಮಹಾಭಾರತ, ಕುರುಕ್ಷೇತ್ರ ಎಲ್ಲವೂ ಅವರ ಕೃತಿಯಲ್ಲಿ ಸಮ್ಮಿಳಿತವಾಗಿವೆ. ಹಿಮಾಲಯಕ್ಕಿಂತ ಎತ್ತರದ ಮನುಷ್ಯರಾದ ಭೈರಪ್ಪನವರನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ಬಡವಾಗಿದೆ. ಎಂದು ಅನಂತ್ ನಾಗ್ ಭಾವುಕರಾಗಿ ಹೇಳಿದರು. ಭೈರಪ್ಪನವರ ಕಾದಂಬರಿಗಳು ಕನ್ನಡ ಸಾಹಿತ್ಯಕ್ಕೆ ಶಾಶ್ವತ ಕೊಡುಗೆಯಾಗಿವೆ, ಅವರ ನಿಧನ ಕನ್ನಡಿಗರಿಗೆ ತುಂಬಲಾರದ ನಷ್ಟವನ್ನುಂಟುಮಾಡಿದೆ.