ದಾವಣಗೆರೆ/ಮಧ್ಯಪ್ರದೇಶ: ದೇಶದ ಹೃದಯ ಭಾಗವಾದ ಮಧ್ಯಪ್ರದೇಶದಲ್ಲಿ ರಾಜಾ ರೋಷವಾಗಿ ಕಳ್ಳತನದ ತರಬೇತಿ ಕೇಂದ್ರಗಳು, ಅಕ್ಷರಶಃ ಕಳ್ಳರ ಪಾಠಶಾಲೆಗಳು ನಡೆಯುತ್ತಿವೆ. ಇದು ಕೇವಲ ಗುಟ್ಟಿನ ದಂಧೆಯಲ್ಲ, ಬದಲಿಗೆ ₹2 ಲಕ್ಷ ಶುಲ್ಕ ಪಾವತಿಸಿದರೆ, ಅಲ್ಲಿ ಕಳ್ಳರಾಗುವ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿಯಲ್ಲಿ ಪೊಲೀಸರಿಂದ ಹೇಗೆ ತಪ್ಪಿಸಿಕೊಳ್ಳುವುದು, ಪಿಕ್‌ಪಾಕೆಟ್, ದರೋಡೆ ಮತ್ತು ಜನಸಂದಣಿ ಮಧ್ಯೆ ಕಳವು ಮಾಡುವ ವಿಧಾನವನ್ನು ಇಲ್ಲಿ ಹೇಳಿಕೊಡಲಾಗುತ್ತದೆ.
ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ಗುಲ್ ಖೇಡಾ, ಹುಲ್ ಖೇಡಾ, ಹಾಗೂ ಕಡಿಯಾ ಸಾಂಸಿ ಎಂಬ ಗ್ರಾಮಗಳಲ್ಲಿ ಈ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸಿದ್ಧ ಬ್ಯಾಂಡ್ ಬಾಜಾ ಅಥವಾ ಸನ್ ದಿಸೋಡಿಯಾ ಗ್ಯಾಂಗ್‌ಗಳಂತಹ ಕುಖ್ಯಾತ ಕಳ್ಳರ ತಂಡಗಳಿಗೆ ಈ ಕೇಂದ್ರಗಳೇ ತವರುಮನೆಗಳಾಗಿವೆ ಎಂದು ಮೂಲಗಳು ತಿಳಿಸಿವೆ.
ಈ ಪಾಠಶಾಲೆಗಳಲ್ಲಿ ಪ್ರವೇಶ ಪಡೆಯಲು ಆಕಾಂಕ್ಷಿಗಳು ₹2 ಲಕ್ಷದವರೆಗೂ ಶುಲ್ಕ ಪಾವತಿಸಬೇಕಾಗುತ್ತದೆ. ತಿಂಗಳೊಪ್ಪತ್ತಿನ ಈ ತರಬೇತಿ ಅವಧಿಯಲ್ಲಿ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ಮಾಲು ಸಮೇತ ಪೊಲೀಸರಿಂದ ಪಾರಾಗುವ ಕುರಿತು ಎಲ್ಲಾ ವಿಶೇಷ ತಂತ್ರಗಳನ್ನು ಕಲಿಸಲಾಗುತ್ತದೆ. ಇಲ್ಲಿ ಕೇವಲ ವಯಸ್ಕರಿಗಷ್ಟೇ ಅಲ್ಲ, ಅಪ್ರಾಪ್ತ ಮಕ್ಕಳಿಗೂ ತರಬೇತಿ ನೀಡಲಾಗುತ್ತಿದೆ ಎಂಬುದು ಇನ್ನೊಂದು ಆಘಾತಕಾರಿ ಅಂಶವಾಗಿದೆ.
ಈ ಗ್ಯಾಂಗ್‌ಗಳು ಅತ್ಯಂತ ಕುತಂತ್ರದಿಂದ 17 ವರ್ಷದೊಳಗಿನ ಮಕ್ಕಳನ್ನೇ ಕಳ್ಳತನಕ್ಕೆ ಬಳಸಿಕೊಳ್ಳುತ್ತವೆ. ಇದಕ್ಕೆ ಮುಖ್ಯ ಕಾರಣ, ಅಪ್ರಾಪ್ತರು ಅಪರಾಧ ಮಾಡಿದರೆ ಪೊಲೀಸ್ ಕೇಸುಗಳಿಂದ ಬೇಗ ಪಾರಾಗಬಹುದು, ಶಿಕ್ಷೆಯ ಪ್ರಮಾಣ ಕಡಿಮೆ ಇರುತ್ತದೆ ಮತ್ತು ಜಾಮೀನು ಕೂಡ ಸುಲಭವಾಗಿ ಸಿಗುತ್ತದೆ. ಈ ಕಾನೂನು ಅಂತರವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಅಪ್ರಾಪ್ತ ಯುವಕರನ್ನು ಕಳ್ಳತನಕ್ಕೆ ಬಳಸಿಕೊಳ್ಳುತ್ತಾರೆ.
ಕಳೆದ ನವೆಂಬರ್ 14 ರಂದು ದಾವಣಗೆರೆ ಹೊರವಲಯದ ಅಪೂರ್ವಾ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ವಿವಾಹ ಸಮಾರಂಭವೊಂದರಲ್ಲಿ ಬ್ಯಾಂಡ್ ಬಾಜಾ ಗ್ಯಾಂಗ್‌ನ ಇಬ್ಬರು ಕಳ್ಳರು ಮದುವೆಗೆ ಬಂದು, ಪದ್ಮಾವತಿ ಎಂಬುವವರ ₹67.48 ಲಕ್ಷ ರೂ. ಮೌಲ್ಯದ ಚಿನ್ನಾಭರಣದ ಬ್ಯಾಗ್ ಕದ್ದು ಪರಾರಿಯಾಗಿದ್ದರು.
ಕಳ್ಳರ ಬೆನ್ನತ್ತಿದ ದಾವಣಗೆರೆ ಪೊಲೀಸ್ ತಂಡವು ಸುದೀರ್ಘ ಕಾರ್ಯಾಚರಣೆಯನ್ನು ಕೈಗೊಂಡಿತು. ಸುಮಾರು 1500 ಕಿಲೋಮೀಟರ್ ದೂರದ ಮಧ್ಯಪ್ರದೇಶದ ಪಚೋರಿ ನಗರಕ್ಕೆ ಮಾರು ವೇಷದಲ್ಲಿ ತೆರಳಿದರು. ಸತತ 15 ದಿನಗಳ ಕಾಲ ಅಲ್ಲೇ ವಾಸವಿದ್ದು, ಸ್ಥಳೀಯ ಪೊಲೀಸರು ಮತ್ತು ಬಾತ್ಮೀದಾರರ ಸಹಾಯದಿಂದ ಆರೋಪಿಗಳು ಎಲ್ಲಿ ಇರುತ್ತಾರೆ ಎಂಬ ನಿಖರ ಮಾಹಿತಿ ಸಂಗ್ರಹಿಸಿದರು. ಅಂತಿಮವಾಗಿ, ಕಳುವಾದ ಆಭರಣಗಳಲ್ಲಿ ₹51.49 ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ದಾವಣಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಮಧ್ಯಪ್ರದೇಶದ ರಾಜ್‌ಗಡ್ ಜಿಲ್ಲೆಯ ಗುಲ್‌ಖೇಡಾ ಗ್ರಾಮದ ಕರಣ್ ವರ್ಮಾ ಮತ್ತು ವಿನಿತ್ ಸಿಸೋಡಿಯಾ ಸದ್ಯಕ್ಕೆ ಪರಾರಿಯಾಗಿದ್ದರೂ, ಪೊಲೀಸರು ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ. ಪೊಲೀಸರು ಅವರಿಗಾಗಿ ಸುಮಾರು 250ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ, 15 ಟೋಲ್‌ಗೇಟ್‌ಗಳಲ್ಲಿನ ದೃಶ್ಯಗಳ ವಿಶ್ಲೇಷಣೆ, ತಾಂತ್ರಿಕ ಮಾಹಿತಿ ಆಧಾರದ ಮೇಲೆ ಕಳುವಾದ ಆಭರಣವನ್ನ ಪತ್ತೆಹಚ್ಚಿದ್ದರು.
‘ಬ್ಯಾಂಡ್ ಬಾಜಾ’ ಹೆಸರಿನ ಈ ಗ್ಯಾಂಗ್‌ಗಳ ಪ್ರಮುಖ ಟಾರ್ಗೆಟ್ ಇರುವುದು ಭರ್ಜರಿ ವಿವಾಹ ಸಮಾರಂಭಗಳು. ರೆಸಾರ್ಟ್‌ಗಳು ಅಥವಾ ದೊಡ್ಡ ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆಗಳಲ್ಲಿ ಈ ಕಳ್ಳರು ಶ್ರೀಮಂತರ ವೇಷದಲ್ಲಿ ಮದುವೆಗೆ ಭಾಗವಹಿಸುತ್ತಾರೆ. ನಂತರ ಜನರ ಗಮನ ಬೇರೆಡೆಯಾದಾಗ, ಕ್ಷಣಾರ್ಧದಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಾರೆ. ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಗದಂತೆ ಮಾಡುವುದು ಮತ್ತು ತನಿಖೆಯ ದಾರಿಯನ್ನು ತಪ್ಪಿಸುವುದು ಇವರಿಗೆ ಕರಗತವಾದ ಕಲೆ. ಈ ಕಳ್ಳರ ತಂಡದ ವಿರುದ್ಧ ದೇಶಾದ್ಯಂತ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.





