ನವದೆಹಲಿ: ಜನ ವಿಶ್ವಾಸ್ (ತಿದ್ದುಪಡಿ) ಮಸೂದೆ-2055 ಪರಿಶೀಲನೆಗೆ ರಚಿಸಲಾದ ಸಂಸದೀಯ ಸ್ಥಾಯಿ ಸಮಿತಿಗೆ ಬೆಂಗಳೂರು ದಕ್ಷಿಣದ ಲೋಕಸಭಾ ಸದಸ್ಯ ಮತ್ತು ಬಿಜೆಪಿಯ ಯುವ ನಾಯಕ ತೇಜಸ್ವಿ ಸೂರ್ಯ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಮಸೂದೆಯನ್ನು ಆಗಸ್ಟ್ 18-2025 ರಂದು ಸ್ಥಾಯಿ ಸಮಿತಿಗೆ ವಹಿಸಲಾಗಿತ್ತು. ಸೂರ್ಯ ಅವರ ಅಧ್ಯಕ್ಷತೆಯಲ್ಲಿ ಸಮಿತಿಯು ಮಸೂದೆಯ ಪ್ರತಿ ವಿಧಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ.
ಇದೇ ಸಮಯದಲ್ಲಿ, ಬ್ಯಾಂಕ್ ದಿವಾಳಿತನ (ತಿದ್ದುಪಡಿ) ಮಸೂದೆ ಪರಿಶೀಲನೆಗೆ ರಚಿತವಾದ ಸಮಿತಿಗೆ ಬಿಜೆಪಿಯ ಹಿರಿಯ ನಾಯಕ ಶ್ರೀ ಬೈಜಯಂತ್ ಪಾಂಡಾ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ನೇತೃ ಶಶಿ ಥರೂರ್ ಅವರನ್ನು ವಿದೇಶಾಂಗ ಸಂಬಂಧಿ ಸಮಿತಿಗೆ ಮರುನೇಮಕ ಮಾಡಲಾಗಿದೆ.
ಈ ನೇಮಕಾತಿಗಳ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳ ಸ್ವಯಂಚಾಲಿತ ಪದಚ್ಯುತಿ ನಿಯಮದ ಪ್ರಸ್ತಾವನೆಯನ್ನು ಹೊಂದಿರುವ ಇನ್ನೊಂದು ಮಸೂದೆಯನ್ನು ಪರಿಶೀಲಿಸಲು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಯಾಗಲು ವಿರೋಧ ಪಕ್ಷಗಳ ಅಸಹಕಾರದಿಂದ ಇನ್ನೂ ಸಾಧ್ಯವಾಗಿಲ್ಲ . ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದಂಥ ಕೆಲವು ಪಕ್ಷಗಳು ಈಗಾಗಲೇ ಜೆಪಿಸಿಯನ್ನು ಬಹಿಷ್ಕರಿಸುವುದಾಗಿ ತಿಳಿಸಿವೆ . ಈ ವಿಳಂಬವು ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ, ಅಂದರೆ ನವೆಂಬರ್ ದ್ವಿತೀಯ ವಾರದಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲು ಪ್ರಾರಂಭಿಸಬಹುದೆಂದು ಸೂಚಿಸಲಾಗಿದೆ.