ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿವಾದ: ಸುಪ್ರೀಂ ಕೋರ್ಟ್‌‌ಗೆ ಅರ್ಜಿ, ನಾಳೆ ವಿಚಾರಣೆ

Untitled design 2025 09 18t134943.688

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆಯು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಆಯ್ಕೆಯನ್ನು ವಿರೋಧಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿತ್ತು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದ್ದು, ಈಗ ಈ ವಿಷಯ ಸುಪ್ರೀಂ ಕೋರ್ಟ್‌ನ ಅಂಗಳಕ್ಕೆ ತಲುಪಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿಭು ಬಖು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ಪೀಠ, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಇತರ ಮೂವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಿತ್ತು. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರ ಆಯ್ಕೆಯಿಂದ ಯಾವುದೇ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಈ ಆಯ್ಕೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ಇಲ್ಲ ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿತ್ತು.

ಆದರೆ, ಈ ತೀರ್ಪಿನ ವಿರುದ್ಧ ಎಚ್.ಎಸ್.ಗೌರವ್ ಎಂಬುವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸೆಪ್ಟೆಂಬರ್ 22 ರಂದು ದಸರಾ ಉದ್ಘಾಟನೆ ನಿಗದಿಯಾಗಿರುವುದರಿಂದ, ತುರ್ತು ವಿಚಾರಣೆಗೆ ಮನವಿ ಮಾಡಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ನೇತೃತ್ವದ ಪೀಠ ಈ ಅರ್ಜಿಯನ್ನು ಶುಕ್ರವಾರ ವಿಚಾರಣೆಗೆ ಒಳಪಡಿಸಲಿದೆ.

ಪ್ರತಾಪ್ ಸಿಂಹ ತಮ್ಮ ಅರ್ಜಿಯಲ್ಲಿ, ಬಾನು ಮುಷ್ತಾಕ್ ಅವರ ಆಯ್ಕೆಯಿಂದ ಹಿಂದೂ ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆಯಾಗಿದೆ ಎಂದು ವಾದಿಸಿದ್ದಾರೆ. ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ, ವೇದ ಮಂತ್ರಗಳ ಜಪ ಮತ್ತು ಧಾರ್ಮಿಕ ಆಚರಣೆಗಳು ಸಂಪ್ರದಾಯದ ಭಾಗವಾಗಿವೆ. ಆದರೆ, ಬಾನು ಮುಷ್ತಾಕ್ ಅವರು ಹಿಂದೂ ವಿರೋಧಿ ಮತ್ತು ಕನ್ನಡ ವಿರೋಧಿ ಭಾವನೆಗಳನ್ನು ಹೊಂದಿದ್ದಾರೆ ಎಂದು ಆರೋಪಿಸಿ, ರಾಜ್ಯ ಸರ್ಕಾರದ ಏಕಪಕ್ಷೀಯ ನಿರ್ಧಾರಕ್ಕೆ ತಡೆಯಾಜ್ಞೆ ಕೋರಿದ್ದರು. ಇದರಿಂದ ಹಿಂದೂಗಳ ಭಾವನೆಗೆ ಘಾಸಿಯಾಗಿದೆ ಎಂದು ಅವರು ದೂರಿದ್ದರು.

ಇದೇ ವೇಳೆ, ಮೈಸೂರಿನ ರಾಜಮನೆತನದವರು ಕೂಡ ಸರ್ಕಾರದ ಈ ನಿರ್ಧಾರವನ್ನು ವಿರೋಧಿಸಿದ್ದಾರೆ. ಬಾನು ಮುಷ್ತಾಕ್ ಅವರಿಗೆ ನೀಡಲಾದ ಆಹ್ವಾನವನ್ನು ಹಿಂಪಡೆಯಲು ನಿರ್ದೇಶನ ನೀಡಬೇಕೆಂದು ಪ್ರತಾಪ್ ಸಿಂಹ ಕೋರಿದ್ದರು. ಆದರೆ, ಹೈಕೋರ್ಟ್ ಈ ವಾದವನ್ನು ಒಪ್ಪಿಕೊಳ್ಳಲಿಲ್ಲ.

Exit mobile version