ತಾಯಿಯನ್ನು ಬಹುಮಹಡಿ ಕಟ್ಟಡದಿಂದ ತಳ್ಳಿ ಹ*ತ್ಯೆಗೈದ ಮಗ

Untitled design 2026 04 15T224426.784

ಬೆಂಗಳೂರು (ಏಪ್ರಿಲ್ 15, 2026): ನಗರದ ಆರ್‌ಆರ್ ನಗರ (RR Nagar) ವ್ಯಾಪ್ತಿಯ ಬೆಮಲ್ ಲೇಔಟ್‌ನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ವೃದ್ಧ ತಾಯಿಯನ್ನು ಆಕೆಯ ಮಗನೇ ಬಹುಮಹಡಿ ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಸಂಭವಿಸಿದೆ. ಸಾವಿತ್ರಮ್ಮ (72) ಮೃತಪಟ್ಟ ದುರ್ದೈವಿ ತಾಯಿಯಾಗಿದ್ದರೆ, ಆಕೆಯ ಮಗ ವೆಂಕಟೇಶ್ (42) ಈ ಕೃತ್ಯವೆಸಗಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಆರ್‌ಆರ್ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿ ಮಗನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆ ವಿವರ 

ಬೆಮಲ್ ಲೇಔಟ್‌ನಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಸಾವಿತ್ರಮ್ಮ ತಮ್ಮ ಮಗ ವೆಂಕಟೇಶ್ ಜೊತೆ ವಾಸಿಸುತ್ತಿದ್ದರು. ಸುಮಾರು 4-5 ವರ್ಷಗಳ ಹಿಂದೆ ತಾಯಿಗೆ ಪಾರ್ಶ್ವವಾಯು (ಸ್ಟ್ರೋಕ್) ಬಡಿದ ಪರಿಣಾಮ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಮಾತನಾಡಲು, ನಡೆದಾಡಲು, ಸ್ವಂತ ಕೆಲಸಗಳನ್ನು ಮಾಡಿಕೊಳ್ಳಲೂ ಆಗಲ್ಲ. ಇವರ ಆರೈಕೆಯ ಹೊರೆ ಸಂಪೂರ್ಣವಾಗಿ ಮಗ ವೆಂಕಟೇಶ್ ಮೇಲೆಯೇ ಇತ್ತು.

ಮಧ್ಯಾಹ್ನದ ವೇಳೆ, ವೆಂಕಟೇಶ್ ತನ್ನ ತಾಯಿಯನ್ನು ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ದನು. ನಂತರ ಅವರನ್ನು ನೂಕಿ ಕೆಳಗೆ ತಳ್ಳಿದನು. ತೀವ್ರ ರಕ್ತಸ್ರಾವದೊಂದಿಗೆ ಕೆಳಗೆ ಬಿದ್ದ ತಾಯಿ ಸ್ಥಳದಲ್ಲೇ ಮೃತಪಟ್ಟರು. ನೆರೆಹೊರೆಯವರು ಮತ್ತು ಸ್ಥಳೀಯರು ಘಟನಾ ಸ್ಥಳದ ಸುತ್ತಲೂ ಸೇರಿದಾಗ, ಮಗ ವೆಂಕಟೇಶ್ ಅಲ್ಲಿ ನಿಂತುಕೊಂಡಿದ್ದನು. ಯಾರೋ ಮಾಹಿತಿ ನೀಡಿದ ಬೆನ್ನಲ್ಲೇ ಆರ್‌ಆರ್ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು.

ಹತ್ಯೆಗೆ ಕಾರಣವೇನು?

 ಪ್ರಾಥಮಿಕ ತನಿಖೆಯಲ್ಲಿ, ತಾಯಿಯ ಅನಾರೋಗ್ಯ ಮತ್ತು ಅಸಹಾಯಕ ಸ್ಥಿತಿಯಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಮಗ ವೆಂಕಟೇಶ್, “ಬೇಸರ ಮತ್ತು ಸಹನೆ ಕಳೆದುಕೊಂಡು” ಈ ಕೃತ್ಯಕ್ಕೆ ಕೈ ಹಾಕಿರುವುದಾಗಿ ತಿಳಿದುಬಂದಿದೆ. ಆರ್‌ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವೆಂಕಟೇಶ್ ಅನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Exit mobile version