ರೇಣುಕಾಸ್ವಾಮಿ ಕೊಲೆ ಮಾದರಿಯಂತೆ ಬೆಂಗಳೂರಿನಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Untitled design 2025 07 07t092035.414

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ನೆನಪಿಸುವಂತಹ ಭೀಕರ ಮತ್ತು ಅಮಾನುಷ ಕೃತ್ಯವೊಂದು ನಡೆದಿದೆ. ಕುಶಾಲ್ ಎಂಬ ಯುವಕನನ್ನು ಕಿಡ್ನಾಪ್ ಮಾಡಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬೆತ್ತಲೆಗೊಳಿಸಿ ವಿಕೃತವಾಗಿ ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳಾದ ಹೇಮಂತ್, ಯಶವಂತ್, ಶಿವಶಂಕರ್, ಮತ್ತು ಶಶಾಂಕ್ ಗೌಡನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಘಟನೆಯ ಹಿನ್ನೆಲೆ

ಕುಶಾಲ್ ಎಂಬ ಯುವಕ ಒರ್ವ ಯುವತಿಯನ್ನು ಎರಡು ವರ್ಷಗಳ ಕಾಲ ಪ್ರೀತಿಸುತ್ತಿದ್ದ. ಆದರೆ, ಎರಡು ವರ್ಷಗಳ ಹಿಂದೆ ಇವರಿಬ್ಬರ ಸಂಬಂಧ ಮುರಿದುಬಿದ್ದಿತ್ತು. ಬಳಿಕ ಆ ಯುವತಿ ಬೇರೊಬ್ಬ ಯುವಕನ ಜೊತೆ ಸಂಬಂಧದಲ್ಲಿದ್ದಳು. ಇದನ್ನು ಸಹಿಸಲಾಗದ ಕುಶಾಲ್, ಯುವತಿಗೆ ಮೆಸೇಜ್‌ಗಳನ್ನು ಕಳುಹಿಸಿದ್ದ. ಈ ವಿಷಯ ಯುವತಿಯ ಸ್ನೇಹಿತರಿಗೆ ತಿಳಿದಾಗ, ಅವರು  ಒಂದು ಪ್ಲಾನ್‌ ಮಾಡಿ, ಕುಶಾಲ್‌ನನ್ನು ಮಾತುಕತೆಗೆ ಕರೆಯುವ ಉದ್ದೇಶದಿಂದ ಕರೆಸಿ, ಅವನನ್ನು ಕಿಡ್ನಾಪ್ ಮಾಡಿ ಸೋಲದೇವನಹಳ್ಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.

ADVERTISEMENT
ADVERTISEMENT
ವಿಕೃತ ಚಿತ್ರಹಿಂಸೆ

ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಬಳಿಕ, ಆರೋಪಿಗಳು ಕುಶಾಲ್‌ನ ಬಟ್ಟೆಗಳನ್ನು ಬಿಚ್ಚಿಸಿ, ಕೋಲುಗಳಿಂದ ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಇದಷ್ಟೇ ಅಲ್ಲ, ಯುವಕನ ಮರ್ಮಾಂಗಕ್ಕೆ ಹೊಡೆದು, ತುಳಿದು ವಿಕೃತವಾಗಿ ಕೃತ್ಯ ಎಸಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಉಲ್ಲೇಖಿಸಿ, “ನೀನು ರೇಣುಕಾಸ್ವಾಮಿಯಂತೆ ಆಗುವೆ” ಎಂದು ಬೆದರಿಕೆ ಹಾಕಿದ್ದಾರೆ. ಈ ಘಟನೆಯನ್ನು ಆರೋಪಿಗಳು ವೀಡಿಯೋ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.

ಸೋಲದೇವನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತಕ್ಷಣ ಆರೋಪಿಗಳಾದ ಹೇಮಂತ್, ಯಶವಂತ್, ಶಿವಶಂಕರ್, ಮತ್ತು ಶಶಾಂಕ್ ಗೌಡನನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ, ಕಿಡ್ನಾಪ್, ಮತ್ತು ದೈಹಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ವೀಡಿಯೋ ಸಾಕ್ಷ್ಯವಾಗಿ ಪೊಲೀಸರಿಗೆ ದೊರೆತಿದ್ದು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

Exit mobile version