ಮೈಸೂರು: ಕನ್ನಡ ಸಾಹಿತ್ಯದ ಮಹಾನ್ ದಿಗ್ಗಜ, ಪದ್ಮಶ್ರೀ ಪುರಸ್ಕೃತ ಹಿರಿಯ ಲೇಖಕ ಡಾ. ಎಸ್.ಎಲ್. ಭೈರಪ್ಪ (94) ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದೆ.
ಬ್ರಾಹ್ಮಣ ಸಂಪ್ರದಾಯದಂತೆ ನಡೆಯಲಿರುವ ಈ ಅಂತ್ಯಕ್ರಿಯೆಗೆ ರಾಜ್ಯ ಸರ್ಕಾರದಿಂದ ಸಂಪೂರ್ಣ ಗೌರವ ಸಲ್ಲಿಸಲಾಗುತ್ತದೆ. ಗುರುವಾರ ಭೈರಪ್ಪನವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮೈಸೂರಿಗೆ ತರಲಾಗಿದ್ದು, ಕಲಾಮಂದಿರದ ಬಳಿ ಕಿಂದರಿ ಜೋಗಿ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಜೆಎಸ್‌ಎಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಶುಕ್ರವಾರ ಬೆಳಗ್ಗೆ 8:30ರಿಂದ ಅವರ ಕುವೆಂಪು ನಗರದ ನಿವಾಸದಲ್ಲಿ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಚಾಮುಂಡಿ ಬೆಟ್ಟದ ಚಿರಶಾಂತಿಧಾಮದಲ್ಲಿ ಅಂತಿಮ ವಿಧಿ ನೆರವೇರಲಿದೆ. ರಾಜ್ಯದ ಗಣ್ಯರು, ಸಾಹಿತಿಗಳು, ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲು ಸಜ್ಜಾಗಿದ್ದಾರೆ.
ಡಾ. ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಅವರು 1931ರಲ್ಲಿ ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದರು. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದರು. ಅವರ ಸಾಹಿತ್ಯ ಪ್ರಯಾಣ 1950ರ ದಶಕದಲ್ಲಿ ಆರಂಭವಾಯಿತು.
ಅವರ ಮೊದಲ ಕಾದಂಬರಿ ‘ಧರ್ಮಶ್ರೀ’ (1959) ಯಿಂದ ಆರಂಭಗೊಂಡು, 24ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದರು. ಅವರ ಪ್ರಸಿದ್ಧ ಕೃತಿಗಳಲ್ಲಿ ‘ವಂಶವೃಕ್ಷ’ (1965), ‘ಪರ್ವ’ (1979), ‘ಆವರಣ’ (2007), ‘ಸಾರ್ಥ’ (1998), ‘ಮಂದ್ರ’ (2010) ಮುಂತಾದವು ಸೇರಿವೆ. ‘ವಂಶವೃಕ್ಷ’ ಕಾದಂಬರಿ 1966ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿತ್ತು.