ಪ್ರಧಾನಿ ಮೋದಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದಿಂದ ಸತತ ನಾಲ್ಕು ಬಾರಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ: ಜನಾಕ್ರೋಶಕ್ಕೆ ಬಿಜೆಪಿ ಹೊಣೆ

Untitled design 2026 05 25T141728.298

ಬೆಂಗಳೂರು, ಮೇ 25: ಮೋದಿಯವರು ಪ್ರಧಾನಿ ಆದ ಬಳಿಕ ಸತತವಾಗಿ ಪೆಟ್ರೋಲ್ ಡೀಸೆಲ್ ಬೆಲೆ ಏರಿಸುವುದನ್ನು ರೂಢಿ ಮಾಡಿಕೊಂಡಿದ್ದು ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ದರಗಳ ಏರಿಸಿದ್ದು, ದೇಶದ ಇತಿಹಾಸದಲ್ಲಿ ಹೀಗೆ ಏರಿಕೆಯಾಗಿದ್ದಿಲ್ಲ. ಜನಸಾಮಾನ್ಯರು, ಮದ್ಯಮ ವರ್ಗದ ಜನರ ಜೀವನ ದುಸ್ತರವಾಗಿದೆ. ಬೆಲೆಯೇರಿಕೆಯಿಂದ ಜನ ತತ್ತರಿಸಿದ್ದಾರೆ ಎಂದರು.

’ಅಚ್ಛೇ ದಿನ್’ ಎಂದು ಜನರಿಗೆ ಟೋಪಿ ಹಾಕಲಾಗುತ್ತಿದೆ

ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನಗಳು ಬರುತ್ತವೆ ಎಂದು ಹೇಳಿ ಜನರಿಗೆ ಟೋಪಿ ಹಾಕಿದ್ದಾರೆ. ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 110 .93 ರೂ.ಗಳಾಗಿವೆ. ಡೀಸೆಲ್ ದರ 98.89 ರೂ.ಗಳಾಗಿವೆ. 7. 52 ರೂ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಪ್ರಧಾನಿ ಮೋದಿಯವರು ದೇಶವನ್ನು ಲೂಟಿ ಮಾಡುತ್ತಿರುವುದು ರುಜುವಾತಾಗುತ್ತಿದೆ ಎಂದರು.

ಕಚ್ಚಾತೈಲ ದರ ಕಡಿಮೆಯಿದ್ದಾಗಿನ ಲಾಭ ಗ್ರಾಹಕರಿಗೆ ದೊರೆಯಲಿಲ್ಲ

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ 71.41 ರೂ. ಪೆಟ್ರೋಲ್ ಲೀ. ಒಂದಕ್ಕೆ ಬೆಲೆಯಿದ್ದರೆ, ಡೀಸೆಲ್ 56.71 ಪೈಸೆಯಿತ್ತು. ಅಂದು 412 ರೂ. ಆಗಿದ್ದ ಗ್ಯಾಸ್ ಸಿಲಿಂಡರ್ ಬೆಲೆ , ಇಂದು 915 ರೂ. ಆಗಿದೆ , ಇದು ದುಪ್ಪಟ್ಟಿಗಿಂತ ಹೆಚ್ಚಾಗಿದೆ. ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೋಲಿಸಿದರೆ ಪ್ರಸ್ತುತ ಬೆಲೆ ಇಳಿದಿದ್ದರೂ ಕೂಡ, ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚುತ್ತಿದೆ. 65 ರಿಂದ 75 ಡಾಲರ್ ಬೆಲೆ ಇದ್ದಾಗ, ಈ ಕಡಿಮೆ ಬೆಲೆಯ ಲಾಭ, ಗ್ರಾಹಕರಿಗೆ ದೊರೆಯಲಿಲ್ಲ. ಪ್ರಸ್ತುತ ಕಚ್ಚಾ ತೈಲದ ಬೆಲೆ 100 ಡಾಲರ್ ಮಿತಿಯೊಳಗಿದ್ದರೂ, ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಸತತ ನಾಲ್ಕು ಬಾರಿ ಏರಿಕೆ ಮಾಡಿದೆ. ಇದರಿಂದಾಗಿ ಗ್ರಾಹಕರಿಗೆ, ರೈತರಿಗೆ, ಜನಸಾಮಾನ್ಯರಿಗೆ ಈ ಬೆಲೆಏರಿಕೆಯ ಬಿಸಿ ತಟ್ಟಲಿದೆ. ಮೋದಿಯವರು ದೇಶವನ್ನು ಹಾಗೂ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

Exit mobile version