ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ಆರೋಪಿ ತಾನೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಿಷಿ ತೇಜ್ ಎಂಬ ಯುವಕ ಹಲ್ಲೆಗೆ ಒಳಗಾಗಿದ್ದು, ದಿವ್ಯ ತೇಜ್ ಎಂಬಾತ ಹಲ್ಲೆ ನಡೆಸಿದ್ದಾನೆ. ಇವರು ಇಬ್ಬರೂ ಸ್ನೇಹಿತರು.
ಘಟನೆಯ ವಿವರ
ದಿವ್ಯ ತೇಜ್ ತನ್ನ ಸ್ನೇಹಿತ ರಿಷಿ ತೇಜ್‌ಗೆ ಮದ್ಯ ತರಲು ಹೇಳಿದ್ದಾನೆ. ಇಬ್ಬರೂ ತಡರಾತ್ರಿಯವರೆಗೆ ಒಟ್ಟಿಗೆ ಕುಡಿದಿದ್ದಾರೆ. ಆದರೆ, ಕಂಠಮಟ್ಟದ ಕುಡಿತದ ಮತ್ತಿನಲ್ಲಿ ದಿವ್ಯ ತೇಜ್, ಕ್ಷುಲ್ಲಕ ಕಾರಣಕ್ಕೆ ರಿಷಿಯ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಬಿಯರ್ ಬಾಟಲಿಯಿಂದ ರಿಷಿಯ ಮೇಲೆ ತೀವ್ರವಾಗಿ ಹೊಡೆದಿರುವ ದಿವ್ಯ, ರಿಷಿಯನ್ನು ರಕ್ತದ ಮಡುವಿನಲ್ಲಿ ಬೀಳಿಸಿದ್ದಾನೆ. ಆದರೆ ಹಲ್ಲೆಯ ನಂತರ ದಿವ್ಯ ತೇಜ್, ರಿಷಿಗೆ ಹೊಸ ಬಟ್ಟೆಯನ್ನು ತಂದುಕೊಟ್ಟಿದ್ದಾನೆ. ಈ ಬಟ್ಟೆಯನ್ನು ಧರಿಸಿ, ಗಾಯಗೊಂಡ ರಿಷಿ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ರಿಷಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದಾಗ, ಆರೋಪಿ ದಿವ್ಯ ತೇಜ್ ತಾನೇ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿತ್ತು. ದಿವ್ಯ ತೇಜ್ ಮನೆಯೊಳಗೆ ನೇಣಿಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
