ಮಗಳನ್ನ ಪ್ರೀತಿಸಿದ್ದವನ ವಿರುದ್ಧ ಕೇಸ್‌; ಜೈಲಿನಿಂದ ಹೊರಬಂದ ಯುವಕನಿಂದ ತಾಯಿ ಕೊ*ಲೆ

Untitled design 2026 02 21T205834.398

ಚಿಕ್ಕಬಳ್ಳಾಪುರ: ಮಗಳನ್ನು ಪ್ರೀತಿಸುತ್ತಿದ್ದ ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದ ತಾಯಿಯನ್ನೇ ಸಿಟ್ಟಿನಿಂದ ಕೊಲೆ ಮಾಡಿದ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತ ಮಹಿಳೆಯನ್ನು ರೇಣುಕಾ (38) ಎಂದು ಗುರುತಿಸಲಾಗಿದೆ. ಈಕೆ ದೇವನಹಳ್ಳಿ ತಾಲೂಕಿನ ಕುಂದಾಣ ಗ್ರಾಮದ ನಿವಾಸಿಯಾಗಿದ್ದು, ಕುಟುಂಬದ ಜೊತೆ ವಾಸವಾಗಿದ್ದರು.

ಆರೋಪಿ ರಂಜಿತ್ ಕುಮಾರ್ ಕೂಡ ಇದೇ ಗ್ರಾಮದವನಾಗಿದ್ದು, ರೇಣುಕಾಳ ಮಗಳನ್ನು ಪ್ರೀತಿಸುತ್ತಿದ್ದನೆಂದು ತಿಳಿದುಬಂದಿದೆ. ಮದುವೆ ವಿಚಾರವಾಗಿ ಹಲವು ಬಾರಿ ಮನೆಗೆ ಬಂದು ಮಾತನಾಡಲು ಯತ್ನಿಸಿದ್ದ ರಂಜಿತ್, ಮಗಳನ್ನು ಮದುವೆ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದನೆಂಬ ಆರೋಪ ಕೇಳಿಬಂದಿದೆ. ಆದರೆ ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ರೇಣುಕಾ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ರಂಜಿತ್ ವಿರುದ್ಧ ಪೋಕೋ ಪ್ರಕರಣ ದಾಖಲಿಸಿದ್ದರು. ಪ್ರಕರಣದ ನಂತರ ರಂಜಿತ್ ಜೈಲುಪಾಲಾಗಿದ್ದು, ಬಳಿಕ ರೌಡಿಶೀಟರ್ ಆಗಿಯೂ ಗುರುತಿಸಿಕೊಂಡಿದ್ದ. 2024ರಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರವೂ ರೇಣುಕಾಳ ಮೇಲೆ ಆತನ ವೈಮನಸ್ಸು ಮುಂದುವರಿದಿತ್ತು ಎನ್ನಲಾಗಿದೆ. ರೇಣುಕಾಳನ್ನು ಕಂಡಾಗಲೆಲ್ಲಾ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದನೆಂದು ಆರೋಪಿಸಲಾಗಿದೆ.

ಘಟನೆಯ ದಿನವೂ ಇದೇ ರೀತಿಯ ಗಲಾಟೆ ನಡೆದಿದೆ. ರೇಣುಕಾ ಮನೆಯ ಮುಂದೆ ಬಂದು ರಂಜಿತ್ ಅವಾಚ್ಯವಾಗಿ ಬೈದಿದ್ದಾನೆ. ಇದಕ್ಕೆ ಪ್ರತಿಯಾಗಿ ರೇಣುಕಾ ಪ್ರಶ್ನಿಸುತ್ತಿದ್ದಂತೆ, ಕೋಪಗೊಂಡ ರಂಜಿತ್ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ರಂಜಿತ್ ತಾಯಿ ರಾಧಮ್ಮ ಮತ್ತು ಅಣ್ಣ ನವೀನ್ ಕೂಡ ಸ್ಥಳಕ್ಕಾಗಮಿಸಿ ರೇಣುಕಾಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಲಾಟೆಯಲ್ಲಿ ರೇಣುಕಾಳ ಮಗ ತಾಯಿಗೆ ಅಡ್ಡ ಬಂದಾಗ ಅವನ ಮೇಲೂ ಹಲ್ಲೆ ನಡೆದಿದ್ದು, ಗಲಾಟೆ ತಡೆಯಲು ಬಂದ ರೇಣುಕಾಳ ತಾಯಿಗೂ ಗಾಯಗಳಾಗಿವೆ. ಹಲ್ಲೆಯ ವೇಳೆ ರೇಣುಕಾ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನಳಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದದರೆ ವೈದ್ಯರು ಆಕೆಯನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.

ಘಟನೆಯ ಬಳಿಕ ರೇಣುಕಾಳ ಸಂಬಂಧಿಕರು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ರಂಜಿತ್, ಆತನ ತಾಯಿ ರಾಧಮ್ಮ ಹಾಗೂ ಅಣ್ಣ ನವೀನ್ ವಿರುದ್ಧ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ದೂರು ದಾಖಲಿಸಿದ್ದಾರೆ. ಗಲಾಟೆಗೆ ಪ್ರಚೋದನೆ ನೀಡಿದ ಆರೋಪವೂ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಗಳು ಊರು ತೊರೆದು ಪರಾರಿಯಾಗಿದ್ದಾರೆ.

ವಿಶ್ವನಾಥಪುರ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

Exit mobile version