ಬೆಂಗಳೂರು, ನವೆಂಬರ್ 22: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (94) ಅವರಿಗೆ ವಯೋಸಹಜ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಎಚ್ಚರಿಕೆರಿಂದ ಅವರ ಮೇಲೆ ನಿಗಾವಹಿಸಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಜೆ ಸ್ಪರ್ಷ ಆಸ್ಪತ್ರೆಗೆ ತೆರಳಿ ಶಾಮನೂರು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಿಎಂಗೆ ಶಾಮನೂರು ಅವರ ಆರೋಗ್ಯದ ಬಗ್ಗೆ ವಿವರ ನೀಡಿದರು. ಮಾಜಿ ಸಚಿವ ಎಚ್. ಆಂಜನೇಯ ಕೂಡ ಸಿಎಂಗೆ ಸಾಥ್ ನೀಡಿದ್ದರು. ಶಾಮನೂರು ಅವರ ಚುನಾವಣಾ ಏಜೆಂಟ್ ಆಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಆಸ್ಪತ್ರೆಯಲ್ಲೇ ಇದ್ದು ಎಲ್ಲ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬದಲಾವಣೆ ಅಸಾಧ್ಯ ಎಂದ ರೇಣುಕಾಚಾರ್ಯ
ದಾವಣಗೆರೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಎಂ.ಪಿ. ರೇಣುಕಾಚಾರ್ಯ ಅವರು ಬಿಜೆಪಿ ರಾಜ್ಯ ಘಟಕದ ಆಂತರಿಕ ಗೊಂದಲಕ್ಕೆ ಪ್ರತಿಕ್ರಿಯಿಸಿ ಸಂಚಲನ ಹೇಳಿಕೆ ನೀಡಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬದಲಾಯಿಸುವುದು ಅಸಾಧ್ಯ. ಯಾರು ಎಷ್ಟೇ ಕೂಗಿದರೂ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಬಣದವರು ದೆಹಲಿಗೆ ಹೋಗಿ ವಿಜಯೇಂದ್ರ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ ಎಂಬ ವಿಚಾರಕ್ಕೆ ತಿರುಗೇಟು ನೀಡಿದ ರೇಣುಕಾಚಾರ್ಯ, ಸಿದ್ದೇಶ್ವರ ಬಣ ದೆಹಲಿಗೆ ಹೋಗಲಿ, ನಮಗೆ ಆಕ್ಷೇಪವಿಲ್ಲ. ಪಕ್ಷದ ಹೈಕಮಾಂಡ್ರೇ ಸೂಚನೆ ನೀಡಿದ್ದಾರೆ. ಈ ಬಗ್ಗೆ ಮಾತಾಡಬೇಡಿ ಎಂದು, ಹಾಗಾಗಿ ನಾವು ಸುಮ್ಮನಿದ್ದೇವೆ. ಆದರೆ ಯಡಿಯೂರಪ್ಪ ಮತ್ತು ವಿಜಯೇಂದ್ರ ವಿರುದ್ಧ ಮಾತಾಡಿ ಮಾತಾಡಿ ಒಬ್ಬರು (ಯತ್ನಾಳ್) ಪಕ್ಷದಿಂದಲೇ ಉಚ್ಚಾಟನೆಯಾಗಿ ಜೆಡಿಎಸ್‌ಗೆ ಹೋಗಿದ್ದಾರೆ ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದೂ-ಹಿಂದೂ ಎಂದು ಕೂಗುವ ಆತ ಜೆಡಿಎಸ್‌ನಲ್ಲಿದ್ದಾಗ ಮಹಮ್ಮದ್ ಪೈಗಂಬರ್ ಆಗಿದ್ದ! ಎಲ್ಲವೂ ನಾಟಕ ಎಂದು ರೇಣುಕಾಚಾರ್ಯ ಲೇವಡಿ ಮಾಡಿದರು.
ಸಿದ್ದೇಶ್ವರ ಬಣ ಮೊದಲಿನಿಂದಲೂ ವಿಜಯೇಂದ್ರ ಹಾಗೂ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ ನಾಗಪ್ಪ ಅವರ ಬದಲಾವಣೆಗೆ ಒತ್ತಾಯಿಸುತ್ತಲೇ ಬಂದಿದೆ. ಆದರೆ ಪಕ್ಷದ ಹೈಕಮಾಂಡ್ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ರೇಣುಕಾಚಾರ್ಯ ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ.
ದಾವಣಗೆರೆಯಲ್ಲಿ ಒಂದೆಡೆ ಕಾಂಗ್ರೆಸ್‌ನ ಹಿರಿಯ ನಾಯಕನ ಆರೋಗ್ಯ ಚಿಂತೆ, ಮತ್ತೊಂದೆಡೆ ಬಿಜೆಪಿಯ ಆಂತರಿಕ ಕಲಹದ ಗುಡುಗು ಜಿಲ್ಲೆಯ ರಾಜಕೀಯ ವಾತಾವರಣ ತೀವ್ರ ಚರ್ಚೆಗೆ ಕಾರಣವಾಘಿದೆ.





