ದಾವಣಗೆರೆ: ರಾಜಕೀಯ ಮುತ್ಸದ್ದಿ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಇಹಲೋಕ ತ್ಯಜಿಸಿದ್ದು, ಇಂದು (ಸೋಮವಾರ) ಅವರಿಗೆ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅತ್ಯಂತ ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ದಾವಣಗೆರೆಯ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ, ದಿವಂಗತ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ, ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಜರುಗಿತು. ಈ ಅಂತಿಮ ವಿಧಿವಿಧಾನಗಳಿಗೆ ಪಂಚಪೀಠಗಳ ಸ್ವಾಮೀಜಿಗಳು ಸಾಕ್ಷಿಯಾದರು ಮತ್ತು ಸಂಪ್ರದಾಯದಂತೆ ವಿಧಿಗಳನ್ನು ನೆರವೇರಿಸಿದರು. ಮಣ್ಣಿನ ಬದಲಿಗೆ, ಲಿಂಗಾಯತ ಸಂಪ್ರದಾಯದಂತೆ ವಿಭೂತಿ ಗಟ್ಟಿಗಳೊಂದಿಗೆ ಪಾರ್ಥಿವ ಶರೀರಕ್ಕೆ ಅಂತಿಮ ಸಂಸ್ಕಾರ ನೀಡಲಾಯಿತು. ಶಾಮನೂರು ಅವರ ಪುತ್ರ ಮತ್ತು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಅವರು ವಿಧಿವಿಧಾನಗಳಲ್ಲಿ ಪಾಲ್ಗೊಂಡರು.
ಅಂತ್ಯಕ್ರಿಯೆಯ ಸಂದರ್ಭದಲ್ಲಿ, ದಿವಂಗತ ನಾಯಕನ ಪಾರ್ಥಿವ ಶರೀರಕ್ಕೆ ಪೊಲೀಸರು ತ್ರಿವರ್ಣ ಧ್ವಜವನ್ನು ಹೊದಿಸಿ ಗೌರವ ಸಲ್ಲಿಸಿದರು. ಆನಂತರ, ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರು ತ್ರಿವರ್ಣ ಧ್ವಜವನ್ನು ಸ್ವೀಕರಿಸಿದರು. ನಂತರ, ರಾಷ್ಟ್ರಗೀತೆಯನ್ನು ನುಡಿಸಿ, ಮೂರು ಸುತ್ತು ಕುಶಾಲತೋಪು ಸಿಡಿಸುವ ಮೂಲಕ ವಿಶೇಷ ಸರ್ಕಾರಿ ಗೌರವವನ್ನು ಸಲ್ಲಿಸಲಾಯಿತು. ವಾದ್ಯವಂದನೆ ಮತ್ತು ಒಂದು ನಿಮಿಷ ಮೌನಾಚರಣೆಯೊಂದಿಗೆ ಅಂತಿಮ ಗೌರವ ಸಲ್ಲಿಸಲಾಯಿತು.
ಕರ್ನಾಟಕದ ರಾಜಕೀಯ ಮತ್ತು ಧಾರ್ಮಿಕ ವಲಯದ ಹಲವು ಗಣ್ಯರು ಶಾಮನೂರು ಶಿವಶಂಕರಪ್ಪ ಅವರ ಅಂತಿಮ ದರ್ಶನ ಪಡೆದರು. ರಾಜಕೀಯ ನಾಯಕರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಆರ್.ವಿ ದೇಶಪಾಂಡೆ, ಸತೀಶ್ ಜಾರಕಿಹೊಳಿ, ಜಮೀರ್ ಅಹಮ್ಮದ್, ಸುಧಾಕರ್, ಈಶ್ವರ್ ಖಂಡ್ರೆ, ಬಸವರಾಜ ರಾಯರಡ್ಡಿ, ವಿಜಯಾನಂದ ಕಾಶಪ್ಪನವರ್. ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಮತ್ತು ಸಿ.ಟಿ. ರವಿ ಸೇರಿದಂತೆ ಧಾರ್ಮಿಕ ಮುಖಂಡರಾದ ಸಿರಿಗೆರೆ ಶ್ರೀಗಳು, ವಚನಾನಂದ ಸ್ವಾಮೀಜಿ ಹಾಗೂ ವಿವಿಧ ಧಾರ್ಮಿಕ ಮುಖಂಡರೂ ಅಂತಿಮ ನಮನ ಸಲ್ಲಿಸಿದರು.
ಸ್ಥಳೀಯ ಪೊಲೀಸ್ ಇಲಾಖೆಯು ವಿಐಪಿ ಗಣ್ಯರಿಗಾಗಿ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಿತ್ತು. ಶಾಮನೂರು ಅವರ ಅಂತ್ಯಸಂಸ್ಕಾರದ ಸಿದ್ಧತೆಯನ್ನು ಕುಟುಂಬಸ್ಥರು ನಡೆಸಿದರು. ಸೊಸೆ ಪ್ರಭಾ ಮಲ್ಲಿಕಾರ್ಜುನ್ ಅವರು ನಂದಾದೀಪ ಹಿಡಿದು ಸಿದ್ಧತೆಗಳಲ್ಲಿ ಪಾಲ್ಗೊಂಡರು. ಬಿಲ್ವಪತ್ರೆ, ಬಾಳೆ ಎಲೆ ಮತ್ತು ವಿಭೂತಿಯನ್ನು ಸಿದ್ಧಪಡಿಸಲಾಗಿತ್ತು. ಸಿದ್ಧಗಂಗಾ ಮಠದಿಂದ ವಿಶೇಷವಾಗಿ 100 ವಿಭೂತಿ ಗಟ್ಟಿಗಳನ್ನು ಕಳಿಸಿಕೊಡಲಾಗಿತ್ತು.
ಬಿದಿರು ಪಲ್ಲಕ್ಕಿಯಲ್ಲಿ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಯ ಸ್ಥಳಕ್ಕೆ ತರುವ ಮುನ್ನ, ಬೆಂಗಳೂರಿನಿಂದ ದಾವಣಗೆರೆಗೆ ಆಗಮಿಸಿದ ಮೃತದೇಹವನ್ನು ಅವರ ಪುತ್ರರಾದ ಎಸ್.ಎಸ್ ಬಕ್ಕೇಶ್, ಎಸ್.ಎಸ್ ಗಣೇಶ ಮತ್ತು ಸಚಿವ ಎ.ಎಸ್ ಮಲ್ಲಿಕಾರ್ಜುನ ಅವರ ನಿವಾಸಗಳಲ್ಲಿ ಕಣ್ವೆಕುಪ್ಪೆ ಶ್ರೀಗಳ ಸಮ್ಮುಖದಲ್ಲಿ ಸಂಪ್ರದಾಯದಂತೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ, ನಗರದ ಪ್ರಮುಖ ರಸ್ತೆಗಳಾದ ಹಳೇ ಕೋರ್ಟ್ ಮೈದಾನ, ರೇಣುಕಾ ಮಂದಿರ ಸರ್ಕಲ್, ಅರುಣ ಸರ್ಕಲ್, ಹೊಂಡದ ಸರ್ಕಲ್, ದುರ್ಗಾಂಬಿಕ ದೇವಸ್ಥಾನದ ರಸ್ತೆಗಳಲ್ಲಿ ಮೆರವಣಿಗೆ ಸಾಗಿ, ಅಂತಿಮವಾಗಿ ಕಲ್ಲೇಶ್ವರ ರೈಸ್ ಮಿಲ್‌ಗೆ ತರಲಾಯಿತು.ಕ್ಷೇತ್ರದ ನೆಚ್ಚಿನ ಜನನಾಯಕನನ್ನು ಕಳೆದುಕೊಂಡ ಜನಸಾಮಾನ್ಯರು ಮಾರ್ಗದುದ್ದಕ್ಕೂ ಫ್ಲೆಕ್ಸ್‌ಗಳನ್ನು ಅಳವಡಿಸಿ, ಪಾರ್ಥಿವ ಶರೀರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಕಂಬನಿ ಮಿಡಿದರು.





