ಬೆಳಗಾವಿ (ಜೂನ್ 25): ಸಚಿವ ಸತೀಶ್ ಜಾರಕಿಹೊಳಿ ಅವರ ಬಾಮೈದ ನಿವಾಸ ಹಾಗೂ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಮುಕ್ತಾಯಗೊಂಡಿದೆ. ಈ ಕಾರ್ಯಾಚರಣೆಯ ಬೆನ್ನಲ್ಲೇ ಇಡಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ದಾಳಿ ವೇಳೆ ಭರ್ಜರಿ ಆಸ್ತಿ ಹಾಗೂ ನಗದು ಪತ್ತೆಯಾಗಿವೆ.
₹13.3 ಕೋಟಿ ಆಸ್ತಿ ವಶಕ್ಕೆ
ಬೆಳಗಾವಿ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಒಟ್ಟು 14 ಸ್ಥಳಗಳಲ್ಲಿ ಏಕಕಾಲಕ್ಕೆ ನಡೆದ ಈ ದಾಳಿಯಲ್ಲಿ ಇಡಿ ಅಧಿಕಾರಿಗಳು ₹13.3 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ವಿವರ ಹೀಗಿದೆ.
-
ನಗದು: ₹5.5 ಕೋಟಿ
-
ಚಿನ್ನಾಭರಣ: ₹7.8 ಕೋಟಿ ಮೌಲ್ಯದ ಒಡವೆಗಳು
-
ವಿದೇಶಿ ಕರೆನ್ಸಿ: ₹3.3 ಲಕ್ಷ ಮೌಲ್ಯದ ನೋಟುಗಳು
ಇದರೊಂದಿಗೆ ಹೂಡಿಕೆ ದಾಖಲೆಗಳು, ಆಸ್ತಿ ಪತ್ರಗಳು ಮತ್ತು ಕ್ಯಾಶ್ ಬುಕ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ. ಇಡಿಯವರ ಪ್ರಕಾರ, ಅಬಕಾರಿ ಲೈಸೆನ್ಸ್ ಮಂಜೂರಾತಿ ಹಾಗೂ ನವೀಕರಣ ಪ್ರಕ್ರಿಯೆಯಲ್ಲಿ ವ್ಯವಸ್ಥಿತ ಲಂಚ ಪದ್ಧತಿ ನಡೆದಿದ್ದು, ಈ ಹಣವನ್ನು ವೈಯಕ್ತಿಕ ಬಳಕೆ, ಐಷಾರಾಮಿ ಆಸ್ತಿ ಖರೀದಿ ಮತ್ತು ಬೆನಾಮಿ ವ್ಯವಹಾರಗಳಿಗೆ ಬಳಸಲಾಗಿದೆ.
ಲಂಚದ ‘ಡೈರಿ’ ರಹಸ್ಯ ಬಹಿರಂಗ
ಈ ದಾಳಿಯಲ್ಲಿ ‘ಡೈರಿ’ ಪತ್ತೆಯಾಗಿದೆ. ಈ ಡೈರಿಯಲ್ಲಿ ವಿವಿಧ ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಎಷ್ಟು ಲಂಚ ಸಂಗ್ರಹಿಸಲಾಗುತ್ತಿತ್ತು ಎಂಬ ಸವಿಸ್ತಾರ ಮಾಹಿತಿ ದಾಖಲಾಗಿದೆ. ಪ್ರತಿ ದಂಗಡಿಯಿಂದ ತಿಂಗಳಿಗೆ ₹50,000 ರಿಂದ ₹2 ಲಕ್ಷದವರೆಗೆ ಲಂಚ ಪಡೆಯುತ್ತಿದ್ದ ಬಗ್ಗೆ ಉಲ್ಲೇಖವಿದೆ. ಬೆಳಗಾವಿ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ 200ಕ್ಕೂ ಹೆಚ್ಚು ಮದ್ಯದಂಗಡಿಗಳು ಈ ಲಂಚ ಜಾಲದಲ್ಲಿ ಸೇರಿವೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಡೈರಿಯಲ್ಲಿ ಕೆಲವು ಪ್ರಮುಖ ರಾಜಕಾರಣಿಗಳ ಹೆಸರೂ ಕಾಣಿಸಿಕೊಂಡಿರುವ ಹಿನ್ನೆಲೆ ತನಿಖೆ ಮತ್ತಷ್ಟು ವಿಸ್ತಾರಗೊಳ್ಳುವ ಸಾಧ್ಯತೆಯಿದೆ. ಲಂಚದ ಹಣ ವರ್ಗಾವಣೆ ಮಾಡಲು ಕುಟುಂಬ ಸದಸ್ಯರು ಮತ್ತು ಸಹಚರರ ಖಾತೆಗಳನ್ನು ಬಳಸಲಾಗಿದೆ ಎಂದು ಇಡಿ ತಿಳಿಸಿದೆ.
ಲೋಕಾಯುಕ್ತ ಎಫ್ಐಆರ್ ಆಧಾರದ ಮೇಲೆ ದಾಳಿ
ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳಾದ ಜಗದೀಶ್ ನಾಯಕ್, ಕೆ.ಎಂ. ತಮ್ಮಣ್ಣ ಮತ್ತು ವೈ. ಮಂಜುನಾಥ್ ವಿರುದ್ಧ ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಇಡಿ ಅಧಿಕಾರಿಗಳು 2002ರ ಪಿಎಂಎಲ್ಎ (PMLA) ಸೆಕ್ಷನ್ 17ರ ಅಡಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
