ಪದ್ಮಶ್ರೀ ಪುರಸ್ಕೃತೆ, ವೃಕ್ಷಮಾತೆ ಎಂದು ಕರೆಸಿಕೊಂಡ ಸಾಲುಮರದ ತಿಮ್ಮಕ್ಕ ಅವರು ಶುಕ್ರವಾರ ವಿಧಿವಶರಾಗಿದ್ದಾರೆ. 114 ವರ್ಷಗಳ ದೀರ್ಘಾಯುಷ್ಯ ಅವರು ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮರಗಳನ್ನು ಮಕ್ಕಳಂತೆ ಸಲಹಿದ, ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸಿದ ಈ ಮಹಿಳೆಯ ನಿಧನದಿಂದ ನಾಡು ಬಡವಾಗಿದೆ. ಆದರೆ ಅವರ ಅಂತಿಮ ಕ್ಷಣಗಳಲ್ಲಿ ನೀಡಿದ ಭಾವನಾತ್ಮಕ ಸಂದೇಶ ಎಲ್ಲರ ಹೃದಯಕ್ಕೆ ಮುಟ್ಟುತ್ತದೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಸ್ಫೂರ್ತಿಯಾಗಿ ಉಳಿಯಲಿದೆ.
ವೃಕ್ಷಮಾತೆಯ ಕೊನೆಯ ಸಂದೇಶ:
ಸಾಯುವ ಮುನ್ನ ಭಾವುಕರಾಗಿದ್ದ ಸಾಲುಮರದ ತಿಮ್ಮಕ್ಕ ಅವರು ಕರ್ನಾಟಕದ ಜನತೆಗೆ ಹೃದಯಸ್ಪರ್ಶಿ ಸಂದೇಶ ನೀಡಿದ್ದಾರೆ. ಅವರ ಮಾತುಗಳು ಜೀವನದ ಶಾಶ್ವತತೆ, ಸಮಾನತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಆಳವಾದ ಚಿಂತನೆಯನ್ನು ಒಳಗೊಂಡಿವೆ. ಸಂದೇಶದ ಪೂರ್ಣ ಪಠ್ಯ ಇಲ್ಲಿದೆ:
ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು.
ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ.… pic.twitter.com/4xYdXQyZUa
— Siddaramaiah (@siddaramaiah) November 14, 2025
“ಪ್ರೀತಿಯ ನನ್ನ ನಾಡಿನ ಜನತೆಗೆ ನಿಮ್ಮ ಪ್ರೀತಿಯ ಅಜ್ಜಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಮಾಡುವ ನಮಸ್ಕಾರಗಳು. ಈ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಇರುವಷ್ಟು ದಿನ ಯಾರಿಗೂ ತೊಂದರೆ ಕೊಡದೆ, ಹಿಂಸೆಯಾಗದಂತೆ, ಬಡವ, ಶ್ರೀಮಂತ, ಭಿಕ್ಷುಕ, ಅಸಹಾಯಕ ಎನ್ನದೆ ಎಲ್ಲರೂ ಒಂದೇ ತರಹ ಬದುಕಿ. ಎಲ್ಲರನ್ನು ಗೌರವಿಸಿ, ಪ್ರೀತಿಸಿ, ದೇಶವನ್ನು ಪ್ರೀತಿಸಿ, ದೇಶ ಚೆನ್ನಾಗಿದ್ದರೆ ಎಲ್ಲರೂ ಚಂದ.
ಚಿಕ್ಕವರಾಗಲಿ, ದೊಡ್ಡವರಾಗಲಿ, ಬಡವರಾಗಲಿ, ಶ್ರೀಮಂತರಾಗಲಿ, ಗಿಡ ನೆಟ್ಟು ಮರಗಳನ್ನಾಗಿ ಬೆಳೆಸಿ, ಗೋ ಕಟ್ಟೆಗಳನ್ನು ಕಟ್ಟಿಸಿ, ಕೆರೆ ಕಟ್ಟಿಸುವುದರ ಮೂಲಕ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಿಸಿ. ಹಣ್ಣು ಬಿಡುವ ಮರಗಳನ್ನು ಬೆಳೆಸಿ ಹಕ್ಕಿಪಕ್ಷಿಗಳ ಆಧಾರವಾಗಲಿ. ದೇಶದಲ್ಲಿರುವ ಎಲ್ಲರಿಗೂ ಒಳ್ಳೆಯದಾಗಲಿ. ದೇಶ ಚೆನ್ನಾಗಿರಲಿ. ಬಡವನನ್ನು ಕಂಡು ಭಿನ್ನ ಭೇದ ಮಾಡಬೇಡಿ. ಮನುಷ್ಯರೆಲ್ಲ ಒಂದೇ, ಹಸಿದವರಿಗೆ ಅನ್ನ ಕೊಡಿ. ನಾನು ಮಾಡಿದ ಗಿಡ ನೆಡುವ ಉಳಿಸುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿ ಮತ್ತು ನನ್ನ ಮಗನಾದ ಉಮೇಶ ದೇಶದಲ್ಲೆಲ್ಲಾ ಗಿಡ ನೆಡುವ ಮತ್ತು ನೆಡೆಸುವ ಕಾರ್ಯ ಮಾಡುತ್ತಾ ಸಾಗು.
ಮತ್ತೊಮ್ಮೆ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ, ಎಲ್ಲರಿಗೂ ಸತಿವತಿ ಭಾಗ್ಯ ಇರಲಿ. ಮಕ್ಕಳ ಭಾಗ್ಯವಿರಲಿ, ನಿಮ್ಮ ಮನೆ ಚೆನ್ನಾಗಿರಲಿ, ದೇಶ ಚೆನ್ನಾಗಿರಲಿ, ಮಕ್ಕಳಿಗೆಲ್ಲ ಒಳ್ಳೆಯ ವಿದ್ಯೆ ಬರಲಿ, ಎಲ್ಲರೂ ಗಿಡ ಮರಗಳನ್ನು ಬೆಳೆಸಿ. ನನ್ನ ಪತಿ ದೇವರ ಆಶೀರ್ವಾದ ಮತ್ತು ನನ್ನ ಆಶೀರ್ವಾದ ನನ್ನ ಮಗನ ಮೇಲಿರಲಿ, ಎಲ್ಲರಿಗೂ ಒಳ್ಳೆಯದಾಗಲಿ.”
ಈ ಸಂದೇಶದಲ್ಲಿ ತಿಮ್ಮಕ್ಕ ಅವರು ಎಲ್ಲರನ್ನೂ ಸಮಾನವಾಗಿ ಕಾಣುವಂತೆ, ಪರಿಸರವನ್ನು ಪ್ರೀತಿಸುವಂತೆ ಮತ್ತು ತಮ್ಮ ಕಾರ್ಯವನ್ನು ಮುಂದುವರಿಸುವಂತೆ ಕೋರಿದ್ದಾರೆ. ಅವರ ಮಗ ಉಮೇಶ್ ಅವರನ್ನು ಉಲ್ಲೇಖಿಸಿ, ಗಿಡ ನೆಡುವ ಕೆಲಸವನ್ನು ದೇಶಾದ್ಯಂತ ವಿಸ್ತರಿಸುವಂತೆ ಹೇಳಿದ್ದಾರೆ.
ತಿಮ್ಮಕ್ಕ ಅವರ ಜೀವನ ಕಥೆ:
ಸಾಲುಮರದ ತಿಮ್ಮಕ್ಕ ಅವರು ತಮ್ಮ ಪತಿ ಜೊತೆಗೂಡಿ ಸಾವಿರಾರು ಸಾಲುಮರಗಳನ್ನು ನೆಟ್ಟು ಬೆಳೆಸಿದ್ದರು. ಮಕ್ಕಳಿಲ್ಲದ ಅವರು ಮರಗಳನ್ನೇ ಮಕ್ಕಳಂತೆ ಪೋಷಿಸಿದರು. ಪದ್ಮಶ್ರೀ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ದೊರೆತಿದ್ದವು. ಅವರ ಕಾರ್ಯ ಪರಿಸರ ಸಂರಕ್ಷಣೆಯಲ್ಲಿ ಮಾದರಿಯಾಗಿದೆ.
ಸಿಎಂ ಸಿದ್ದರಾಮಯ್ಯ ಸಂತಾಪ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಸಂತಾಪ ಸೂಚಿಸಿದ್ದಾರೆ. “ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ. ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು. ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಅಗಲಿದ ಮಹಾಚೇತನಕ್ಕೆ ನನ್ನ ನಮನಗಳು. ಸಾಲುಮರದ ತಿಮ್ಮಕ್ಕನವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ತಿಮ್ಮಕ್ಕ ಅವರ ನಿಧನದಿಂದ ಪರಿಸರ ಪ್ರೇಮಿಗಳು ದುಃಖದಲ್ಲಿದ್ದಾರೆ. ಅವರ ಸಂದೇಶವನ್ನು ಅನುಸರಿಸಿ, ಪ್ರತಿಯೊಬ್ಬರೂ ಗಿಡ ನೆಡಿ, ದೇಶವನ್ನು ಹಸಿರಾಗಿಸೋಣ.
