ಕರ್ನಾಟಕ ಸರ್ಕಾರವು ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ವೃತ್ತಿಪರ ಚಟುವಟಿಕೆಗಳಿಗಾಗಿ ಉಚಿತ ಬಸ್ ಪಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ಪತ್ರಕರ್ತರಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರತಿನಿಧಿಸುವ ಮಾಧ್ಯಮ ಸಂಸ್ಥೆಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿ ನೋಂದಾಯಿತವಾಗಿರಬೇಕು.
2024-25ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿಗಳು ಈ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಯ ಮೂಲಕ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಸಾಮಾನ್ಯ ಮತ್ತು ವೇಗದೂತ ಬಸ್ಸುಗಳಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತವಾಗಿ ಸಂಚರಿಸಲು ಪತ್ರಕರ್ತರಿಗೆ ಅವಕಾಶವಿದೆ.
ಅರ್ಹತೆ ಮತ್ತು ಅಗತ್ಯ ದಾಖಲೆಗಳೇನು?
ಗ್ರಾಮೀಣ ಪತ್ರಕರ್ತರು ಉಚಿತ ಬಸ್ ಪಾಸ್ ಪಡೆಯಲು ಈ ಕೆಳಗಿನ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು:
-
ಸ್ವಯಂ ಘೋಷಣಾ ಪತ್ರ: ಅರ್ಜಿದಾರರ ವೈಯಕ್ತಿಕ ಮಾಹಿತಿ.
-
ನೇಮಕಾತಿ ಪತ್ರ: ಪೂರ್ಣಾವಧಿ ಅಥವಾ ಅರೆಕಾಲಿಕ ವರದಿಗಾರರಾಗಿ ನೇಮಕಗೊಂಡಿರುವ ದಾಖಲೆ.
-
ಶಿಫಾರಸ್ಸು ಪತ್ರ: ಸಂಪಾದಕರು ಅಥವಾ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರಿಂದ.
-
ಬ್ಯಾಂಕ್ ಖಾತೆ ವಿವರ: ಕಳೆದ 11 ತಿಂಗಳ ಲೈನೇಜ್ ಅಥವಾ ಸಂಭಾವನೆಗೆ ಸಂಬಂಧಿಸಿದ ದಾಖಲೆ.
-
ಸೇವಾನುಭವ ಪ್ರಮಾಣ ಪತ್ರ: ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯಿಂದ.
-
ವಾಸಸ್ಥಳ ಪ್ರಮಾಣ ಪತ್ರ: ತಹಶೀಲ್ದಾರರಿಂದ ಪಡೆದದ್ದು.
ಯೋಜನೆಯ ವಿವರ:
-
ಉಪಗ್ರಹ ಆಧಾರಿತ ವಾಹಿನಿಗಳು: ತಾಲೂಕು ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಒಬ್ಬ ಕ್ಯಾಮರಾಮ್ಯಾನ್ ಮತ್ತು ಒಬ್ಬ ವರದಿಗಾರರಿಗೆ ಮುಖ್ಯಸ್ಥರ ಶಿಫಾರಸ್ಸಿನೊಂದಿಗೆ ಬಸ್ ಪಾಸ್.
-
ರಾಜ್ಯಮಟ್ಟದ ಪತ್ರಿಕೆಗಳು: ಕನ್ನಡ ಮತ್ತು ಇಂಗ್ಲೀಷ್ ಸೇರಿ 15 ಪತ್ರಿಕೆಗಳಿಗೆ ತಾಲೂಕಿಗೆ ಒಬ್ಬ ವರದಿಗಾರನಿಗೆ ಬಸ್ ಪಾಸ್.
-
ಜಿಲ್ಲಾಮಟ್ಟದ ಪತ್ರಿಕೆಗಳು: ಸಂಪಾದಕರು ಅಥವಾ ಶಿಫಾರಸ್ಸು ಮಾಡಿದ ಒಬ್ಬ ವರದಿಗಾರನಿಗೆ.
-
ಪ್ರಾದೇಶಿಕ ಪತ್ರಿಕೆಗಳು: 6 ಪುಟಗಳ ಪತ್ರಿಕೆಗೆ ಒಬ್ಬ ವರದಿಗಾರ ಮತ್ತು ಒಬ್ಬ ಛಾಯಾಗ್ರಾಹಕ; 8 ಅಥವಾ ಹೆಚ್ಚು ಪುಟಗಳಿಗೆ ಇಬ್ಬರು ವರದಿಗಾರರು ಮತ್ತು ಒಬ್ಬ ಛಾಯಾಗ್ರಾಹಕ ಅಥವಾ ಒಬ್ಬ ವರದಿಗಾರ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ:
ಅರ್ಜಿಗಳನ್ನು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ ಕೇಂದ್ರ ಕಚೇರಿಗೆ ವರ್ಗಾಯಿಸಲಾಗುವುದು. ರಾಜ್ಯಮಟ್ಟದ ಆಯ್ಕೆ ಸಮಿತಿಯು ಪರಿಶೀಲನೆ ನಡೆಸಿ, ಆಯ್ಕೆಯಾದವರಿಗೆ ಬಸ್ ಪಾಸ್ ವಿತರಿಸಲಾಗುವುದು. ಸಾಮಾನ್ಯ ಮನರಂಜನಾ ವಾಹಿನಿಗಳು, ನಿಯತಕಾಲಿಕೆಗಳು, ಮತ್ತು ಮಾನ್ಯತೆ ಇಲ್ಲದ ಪತ್ರಕರ್ತರಿಗೆ ಈ ಯೋಜನೆಯಡಿ ಅವಕಾಶವಿಲ್ಲ.
ಅರ್ಜಿ ಎಲ್ಲಿ ಸಲ್ಲಿಕೆಮಾಡಬೇಕು:
ಆಸಕ್ತ ಮತ್ತು ಅರ್ಹ ಪತ್ರಕರ್ತರು ಗ್ರಾಮ ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ, ಸೇವಾಸಿಂಧು ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬಹುದು. ಅಪ್‌ಲೋಡ್ ಮಾಡಿದ ದಾಖಲೆಗಳು ಮತ್ತು ಆನ್‌ಲೈನ್ ಅರ್ಜಿಯ ಮುದ್ರಿತ ಪ್ರತಿಯನ್ನು ಸ್ವಯಂ ದೃಢೀಕರಿಸಿ, ಜಿಲ್ಲಾ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.