ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ದೀರ್ಘಕಾಲದ ವಿವಾದಕ್ಕೆ ತೆರೆಯೊಡ್ಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನ ಕೊನೆಗೂ ಆರಂಭವಾಗಿದೆ. ಸರ್ಕಾರದ ಷರತ್ತುಬದ್ಧ ಅನುಮತಿಯೊಂದಿಗೆ ನಡೆಯುತ್ತಿರುವ ಈ ಕಾರ್ಯಕ್ರಮವು ಪೊಲೀಸರ ಬಿಗಿ ಭದ್ರತೆಯಡಿ ಸುಸೂತ್ರವಾಗಿ ಸಾಗುತ್ತಿದೆ. ಆದರೆ, ಮಾರ್ಗದುದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿದೆ.
ಚಿತ್ತಾಪುರ ನಗರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾದ ಪಥಸಂಚಲನದಲ್ಲಿ ಸುಮಾರು 300 ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದಾರೆ. ಇವರೊಂದಿಗೆ 50 ಮಂದಿ ಬ್ಯಾಂಡ್ ಸಿಬ್ಬಂದಿಗಳು ಸೇರಿದ್ದಾರೆ. ಗಣವೇಷಧಾರಿಗಳು ತಮ್ಮ ವಿಶಿಷ್ಟ ಖಾಕಿ ನಿಕ್ಕರ್, ಬಿಳಿ ಶರ್ಟ್ ಮತ್ತು ಕೇಸರಿ ಟೋಪಿಯೊಂದಿಗೆ ಸಾಲುಗಟ್ಟಿ ನಡೆಯುತ್ತಿದೆ. ಪಥಸಂಚಲನದ ಮಾರ್ಗದುದ್ದಕ್ಕೂ ಸಿಸಿ ಕ್ಯಾಮರಾಗಳ ಕಣ್ಗಾವಲು ಹಾಕಲಾಗಿದ್ದು, ಪೊಲೀಸರು ಪ್ರತಿ ಮೂಲೆಯಲ್ಲೂ ಕಟ್ಟೆಚ್ಚರ ವಹಿಸಿದ್ದಾರೆ. ಡ್ರೋನ್ ಕ್ಯಾಮರಾಗಳು ಆಕಾಶದಿಂದಲೂ ನಿಗಾ ವಹಿಸುತ್ತಿವೆ. ಇದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.
ಪಥಸಂಚಲನದ ಮಾರ್ಗವು ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಕೆನರಾ ಬ್ಯಾಂಕ್ ಸರ್ಕಲ್, ಎಪಿಎಂಸಿ ಮಾರ್ಕೆಟ್ ಮಾರ್ಗವಾಗಿ ಸಾಗಿ ಮತ್ತೆ ಬಜಾಜ್ ಕಲ್ಯಾಣ ಮಂಟಪಕ್ಕೆ ಬಂದು ತಲುಪುತ್ತದೆ. ಈ ಮಾರ್ಗದುದ್ದಕ್ಕೂ ಕೇಸರಿ ಬಾವುಟಗಳು ಅಲಂಕರಿಸಲ್ಪಟ್ಟಿದ್ದು, ಸ್ಥಳೀಯ RSS ಕಾರ್ಯಕರ್ತರು ಮತ್ತು ಬೆಂಬಲಿಗರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಮಾರ್ಗದಲ್ಲಿ ನಿಂತಿದ್ದ ಜನರು ಗಣವೇಷಧಾರಿಗಳ ಮೇಲೆ ಪುಷ್ಪಮಳೆ ಸುರಿದು ಸ್ವಾಗತಿಸುತ್ತಿದ್ದಾರೆ. ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಸೇರಿದಂತೆ ಸಾವಿರಾರು ಜನರು ಈ ಮೆರವಣಿಗೆಯನ್ನು ವೀಕ್ಷಿಸಲು ಆಗಮಿಸಿದ್ದಾರೆ.
ಈ ಪಥಸಂಚಲನಕ್ಕೆ ಸರ್ಕಾರ ಅನುಮತಿ ನೀಡುವಲ್ಲಿ ಹಲವು ಷರತ್ತುಗಳನ್ನು ವಿಧಿಸಿದೆ. ಮುಖ್ಯವಾಗಿ, ಯಾವುದೇ ಭಾಷಣಗಳು ಅಥವಾ ಘೋಷಣೆಗಳು ಇರುವಂತಿಲ್ಲ, ಕೇವಲ ಮೆರವಣಿಗೆ ಮತ್ತು ಬ್ಯಾಂಡ್ ಸಂಗೀತ ಮಾತ್ರ. ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ವತಃ ಸ್ಥಳಕ್ಕೆ ಆಗಮಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚಿತ್ತಾಪುರದಲ್ಲಿ RSS ಪಥಸಂಚಲನೆಗೆ ಹೈಕೋರ್ಟ್ ಗ್ರಿನ್ ಸಿಗ್ನಲ್..!
ಚಿತ್ತಾಪುರ: ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನೆಗೆ ಹೈಕೋರ್ಟ್ ಬ್ರೇಕ್ ಹಾಕಿದ್ದು, ನವೆಂಬರ್ 2ರಂದು ಪಥಸಂಚಲನೆ ನಡೆಸಲು ಕಲಬುರಗಿ ಹೈಕೋರ್ಟ್ ಅನುಮತಿ ನೀಡಿದೆ. ಎರಡು ಸಂಘಟನೆಗಳಿಗೆ ಒಂದೇ ದಿನ ಪಥಸಂಚಲನೆ ಅನುಮತಿ ನೀಡಲು ಸಾಧ್ಯವಿಲ್ಲ ಎಂಬ ತಹಶೀಲ್ದಾರರ ನಿರ್ಧಾರವನ್ನು ಕೋರ್ಟ್ ಸಮರ್ಥಿಸಿದೆ.
ಚಿತ್ತಾಪುರ ತಹಶೀಲ್ದಾರ್ ಕಚೇರಿಯು ಆರ್‌ಎಸ್‌ಎಸ್ ಮತ್ತು ಭೀಮ್ ಆರ್ಮಿ ಸಂಘಟನೆಗಳಿಬ್ಬರಿಗೂ ಪಥಸಂಚಲನೆಗೆ ಅನುಮತಿ ನಿರಾಕರಿಸಿತ್ತು. ಎರಡೂ ಸಂಘಟನೆಗಳು ಒಂದೇ ದಿನ ಪಥಸಂಚಲನೆ ಮಾಡಲು ಅರ್ಜಿ ಸಲ್ಲಿಸಿದ್ದವು. ತಹಶೀಲ್ದಾರರು ಒಂದೇ ದಿನ ಎರಡು ಸಂಘಟನೆಗಳ ಪಥಸಂಚಲನೆ ಅನುಮತಿ ನೀಡಿದರೆ ಕಾನೂನು-ಸುವ್ಯವಸ್ಥೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಈ ನಿರ್ಧಾರವನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಸಂಘಟನೆ ಕಲಬುರಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸಂಘಟನೆಯ ಪರ ವಕೀಲ ಅರುಣ್ ಶ್ಯಾಮ್ ಮಾತನಾಡಿ, ಪಥಸಂಚಲನೆಗೆ ಅನುಮತಿ ನಿರಾಕರಿಸಲು ಸಾಕಷ್ಟು ಕಾರಣಗಳನ್ನು ತಹಶೀಲ್ದಾರರು ನೀಡಿಲ್ಲ ಎಂದು ವಾದ ಮಂಡಿಸಿದರು. ಸರ್ಕಾರದ ಪರ ವಕೀಲರಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು ತಹಶೀಲ್ದಾರರ ನಿರ್ಧಾರವನ್ನು ಸಮರ್ಥಿಸಿದರು.
ನ್ಯಾಯಮೂರ್ತಿಗಳು ಎರಡೂ ಸಂಘಟನೆಗಳ ಪಥಸಂಚಲನೆಗೆ ಬೇರೆ ಬೇರೆ ದಿನಗಳಲ್ಲಿ ಅವಕಾಶ ನೀಡುವಂತೆ ಸೂಚಿಸಿದರು. ಆರ್‌ಎಸ್‌ಎಸ್ ಸಂಘಟನೆಗೆ ನವೆಂಬರ್ 2ರಂದು ಪಥಸಂಚಲನೆ ನಡೆಸಲು ಹೈಕೋರ್ಟ್ ಅನುಮತಿ ನೀಡಿತು. ಭೀಮ್ ಆರ್ಮಿ ಸಂಘಟನೆಗೆ ಬೇರೆ ದಿನ ಅವಕಾಶ ನೀಡುವಂತೆ ಸೂಚಿಸಲಾಯಿತು.
ಆರ್‌ಎಸ್‌ಎಸ್ ಸಂಘಟನೆಯ ವಕೀಲರು ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದರು. ಸರ್ಕಾರದ ವಕೀಲರು ಕೋರ್ಟ್ ಸೂಚನೆಗಳನ್ನು ಪಾಲಿಸುವುದಾಗಿ ತಿಳಿಸಿದರು.
