ಶಿವಮೊಗ್ಗದಲ್ಲಿ ಕಾನೂನು-ಸುವ್ಯವಸ್ಥೆ ಛಿದ್ರಗೊಂಡಿದೆ: ಶಾಸಕ ಎಸ್.ಎನ್. ಚನ್ನಬಸಪ್ಪ ಗೃಹ ಸಚಿವರಿಗೆ ದೂರು

Untitled design 2025 11 19T224048.281

ಬೆಂಗಳೂರು, ನವೆಂಬರ್ 19, 2025: ಶಿವಮೊಗ್ಗ ಮಹಾನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಆರೋಪಿಸಿರುವ ಶಿವಮೊಗ್ಗ ಗ್ರಾಮಾಂತರ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಇಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ (DG & IGP) ಡಾ. ಎಂ.ಎ. ಸಲೀಂ ಹಾಗೂ ಪೊಲೀಸ್ ಮಹಾನಿರ್ದೇಶಕ (ADGP) ಹಿತೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ಅಪರಾಧ ದಿನೇ ದಿನೇ ಹೆಚ್ಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ತಕ್ಷಣ ಶಿಸ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಕಳೆದ ಎರಡು ವರ್ಷಗಳಿಂದ ಶಿವಮೊಗ್ಗ ನಗರದಲ್ಲಿ ನಾಗರಿಕರ ಮೇಲೆ ನಿರಂತರ ಹಲ್ಲೆಗಳು, ಮಾದಕ ದ್ರವ್ಯಗಳ ಮಾರಾಟ ಮತ್ತು ಬಳಕೆಯಲ್ಲಿ ಭಾರೀ ಏರೀತಿಯ ಹೆಚ್ಚಳ, ಗ್ಯಾಂಗ್‌ಗಳ ಆರ್ಭಟ, ರೌಡಿಶೀಟರ್‌ಗಳ ದಬ್ಬಾಳಿಕೆ ಹೀಗೆ ಒಂದಲ್ಲ ಒಂದು ಕಾರಣದಿಂದ ಜನರು ಆತಂಕದಲ್ಲಿದ್ದಾರೆ ಎಂದು ಶಾಸಕರು ಗೃಹ ಸಚಿವರ ಗಮನಕ್ಕೆ ತಂದರು. ಇತ್ತೀಚೆಗೆ ನಗರದ ಯುವಕ ಹರೀಶ್ ಎಂಬುವವರ ಮೇಲೆ ಮುಸ್ಲಿಂ ಗುಂಡಾಗಳಿಂದ ನಡೆದ ಆರ್ಭಟದ ಹಲ್ಲೆಯ ಪ್ರಕರಣವನ್ನು ವಿವರಿಸಿ, ಇಂತಹ ಘಟನೆಗಳಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಶಾಸಕರ ದೂರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶಿವಮೊಗ್ಗದಲ್ಲಿ ಕಾನೂನು-ಸುವ್ಯವಸ್ಥೆಯನ್ನು ಕಾಪಾಡುವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಜನರ ಸುರಕ್ಷತೆಗೆ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವರು ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಇಲಾಖೆಯ ಕಾರ್ಯಕ್ಷಮತೆಯನ್ನು ಸಮಗ್ರವಾಗಿ ಪರಿಶೀಲಿಸಲು ಪೂರ್ವ ವಲಯ ಐಜಿಪಿ ರವಿ ಕಾಂತೇಗೌಡ ಅವರನ್ನು ತಕ್ಷಣ ಕ್ಷೇತ್ರಕ್ಕೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

ಗುರುವಾರ (ನವೆಂಬರ್ 20) ಬೆಳಗ್ಗೆಯೇ ಐಜಿಪಿ ರವಿ ಕಾಂತೇಗೌಡ ಅವರು ಶಿವಮೊಗ್ಗಕ್ಕೆ ಆಗಮಿಸಿ, ಎಲ್ಲ ಪೊಲೀಸ್ ಠಾಣೆಗಳ ಚಟುವಟಿಕೆಗಳನ್ನು ಪರಿಶೀಲಿಸಲಿದ್ದಾರೆ. ಜೊತೆಗೆ ಜನಪ್ರತಿನಿಧಿಗಳು, ವ್ಯಾಪಾರಿಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸಿ ನೇರವಾಗಿ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಬೇಜವಾಬ್ದಾರಿ ಕರ್ತವ್ಯ ನಿರ್ವಹಣೆ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಶಿವಮೊಗ್ಗದ ಜನರು ರಾತ್ರಿ ಶಾಂತಿಯಿಂದ ನಿದ್ರೆ ಮಾಡುವಂತೆ ಮಾಡುವುದು ನನ್ನ ಜವಾಬ್ದಾರಿ. ಪೊಲೀಸ್ ಇಲಾಖೆಯಲ್ಲಿ ನಿರ್ಲಕ್ಷ್ಯಕ್ಕೆ ಶೂನ್ಯ ಸಹಿಷ್ಣುತಾ ನೀತಿ ಜಾರಿಯಾಗಬೇಕು. ಗೃಹ ಸಚಿವರೂ ಡಿಜಿಪಿ ಸಾಹೇಬರೂ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಐಜಿಪಿ ಅವರ ಭೇಟಿಯಿಂದ ಖಂಡಿತವಾಗಿಗೂ ಬದಲಾವಣೆ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ರೌಡಿ ಗ್ಯಾಂಗ್‌ಗಳ ಆರ್ಭಟ, ಗಂಜಾಯಿ-ಗಾಂಜಾ ಮಾರಾಟ, ಯುವಕರ ಮೇಲೆ ಚಾಕು ಇರಿತ, ಮಹಿಳೆಯರಿಗೆ ಕಿರುಕುಳ ಹೀಗೆ ಒಂದಲ್ಲ ಒಂದು ಕಾರಣಕ್ಕೆ ಜನರು ಆತಂಕದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವರ ಸೂಚನೆ ಮೇರೆಗೆ ಶಿವಮೊಗ್ಗಕ್ಕೆ ಹೆಚ್ಚುವರಿ ಪೊಲೀಸ್ ಬಲ ನೀಡುವ, ರಾತ್ರಿ ಗಸ್ತು ಹೆಚ್ಚಿಸುವ, ಸಿಸಿಟಿವಿ ವ್ಯವಸ್ಥೆಯನ್ನು ಬಲಪಡಿಸುವ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ.

Exit mobile version