ತಾಯಿ ಕಣ್ಣೆದುರೇ ರೌಡಿಶೀಟರ್ ಪವನ್ ಕುಮಾರ್ ಬರ್ಬರ ಹ*ತ್ಯೆ

Untitled design 2026 02 26T105505.050

ಬೆಂಗಳೂರು, ಫೆ. 26: ಹೆತ್ತ ತಾಯಿಯ ಕಣ್ಣೆದುರೇ ಮಗನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಥಣಿಸಂದ್ರ ವ್ಯಾಪ್ತಿಯ ಅಮರಜ್ಯೋತಿ ಲೇಔಟ್‌ನಲ್ಲಿ ಬುಧವಾರ ಸಂಜೆ ರೌಡಿಶೀಟರ್ ಪವನ್ ಕುಮಾರ್ (25) ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಘಟನೆಯ ವಿವರ

ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್ ಆಗಿದ್ದ ಪವನ್ ಕುಮಾರ್, ಹಿಂದೆ ನಡೆದಿದ್ದ ಮರ್ಡರ್ ಪ್ರಕರಣವೊಂದರಲ್ಲಿ A5 ಆರೋಪಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ. ಕಳೆದ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದ ಆತ, ಇತ್ತೀಚೆಗೆ ಸಾಮಾನ್ಯ ಜೀವನ ನಡೆಸಲು ಯತ್ನಿಸುತ್ತಿದ್ದನೆಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮನೆ ಬಳಿ ದಾಳಿ ನಡೆಸಿದ ಗ್ಯಾಂಗ್

ಮೂರು ಬೈಕ್‌ಗಳಲ್ಲಿ ಬಂದಿದ್ದ ಆರು ಮಂದಿ ಆರೋಪಿಗಳು ಹೆಲ್ಮೆಟ್ ಧರಿಸಿಕೊಂಡೇ ಪವನ್ ಮನೆ ಬಳಿ ಬಂದಿದ್ದಾರೆ. ಪವನ್ ಮನೆ ಬಳಿ ನಿಂತ ಕ್ಷಣದಲ್ಲೇ ಆತನ ಮೇಲೆ ಮಚ್ಚು ಮತ್ತು ಲಾಂಗ್‌ಗಳಂತಹ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಪವನ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾನೆ .

ಈ ಸಂದರ್ಭದಲ್ಲಿ ಪವನ್‌ನ ತಾಯಿ ಕೋಮಲ ಮಗನನ್ನು ರಕ್ಷಿಸಲು ಮುಂದಾದರೂ, ದುಷ್ಕರ್ಮಿಗಳು ಆಕೆಯನ್ನು ತಳ್ಳಿ ಹಾಕಿ ನಿರ್ದಯವಾಗಿ ಹತ್ಯೆ ನಡೆಸಿ ಪರಾರಿಯಾಗಿದ್ದಾರೆ. “ನನ್ನ ಮುಂದೆಯೇ ಮಗನನ್ನು ಕೊಂದರು” ಎಂದು ಕೋಮಲ ಕಣ್ಣೀರಿಟ್ಟಿದ್ದಾರೆ..

ಹಳೆಯ ದ್ವೇಷವೇ ಕಾರಣ?

ಪವನ್ ಕುಮಾರ್ ಹಿಂದೆ ಡಿಜೆ ಹಳ್ಳಿಯ ಕಪಿಲ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು ಎಂಬ ಮಾಹಿತಿ ಇದೆ. ಆ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಹತ್ಯೆ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪವನ್ ಕೆಲ ದಿನಗಳ ಹಿಂದೆ ‘ಪ್ರೇಮ್’ ಎಂಬಾತ ನನ್ನ ಮೇಲೆ ದಾಳಿ ಮಾಡಬಹುದು ಎಂದು ತಾಯಿಗೆ ಹೇಳಿದ್ದನಂತೆ.

ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪವನ್, ಮತ್ತೆ ತಪ್ಪು ದಾರಿಯಲ್ಲಿ ಹೋಗಬಾರದು ಎಂದು ಕುಟುಂಬಸ್ಥರು ಪ್ರಯತ್ನಿಸುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಮನೆಯ ಸಮೀಪವೇ ಬೇಕರಿ ಅಂಗಡಿ ತೆರೆದು ಕೊಟ್ಟು ಹೊಸ ಜೀವನ ಆರಂಭಿಸಲು ಪ್ರೇರೇಪಿಸಿದ್ದರು.

ಪೊಲೀಸರು ಚುರುಕುಗೊಂಡ ತನಿಖೆ

ಘಟನೆ ತಿಳಿಯುತ್ತಿದ್ದಂತೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲು ಪೊಲೀಸರು ಶ್ರಮಿಸುತ್ತಿದ್ದಾರೆ.

Exit mobile version