ಮಾಸ್ಕೋ: ರಷ್ಯಾದ ಇರ್ಕುಟ್ಸ್ಕ್ ಪ್ರಾಂತ್ಯದಲ್ಲಿ ಪ್ಲೇಗ್ ಬ್ಯಾಕ್ಟೀರಿಯಾ ಸೋಂಕಿಗೆ ಸಂಬಂಧಿಸಿದಂತೆ ಮತ್ತೊಂದು ಸಾವಿನ ಸುದ್ದಿ ವರದಿಯಾಗಿದೆ. ಈ ಮೂಲಕ ಪ್ಲೇಗ್ ಸೋಂಕಿನ ಆತಂಕ ಮತ್ತಷ್ಟು ಹೆಚ್ಚಿದೆ. ಆದರೆ, ಈ ಎರಡನೇ ಸಾವಿನ ಬಗ್ಗೆ ರಷ್ಯಾದ ಅಧ್ಯಕ್ಷೀಯ ಕಚೇರಿ ಕ್ರೆಮ್ಲಿನ್ ಸ್ಪಷ್ಟ ನಿರಾಕರಣೆ ನೀಡಿದೆ.
ಮೊದಲ ಸಾವಿನ ಹಿನ್ನೆಲೆ
ಅಕ್ಟೋಬರ್ 2 ರಂದು ಇರ್ಕುಟ್ಸ್ಕ್ ಪ್ರಾಂತ್ಯದ ಶೆಲೆಖೋವ್ ನಗರದಲ್ಲಿ 28 ವರ್ಷದ ಯುವತಿ ಡಾರಿಯಾ ಶಿಪಿಲೋವಾ ಎಂಬುವವರು ಪ್ಲೇಗ್ ಸೋಂಕಿಗೆ ಬಲಿಯಾಗಿದ್ದರು. ಅವರು ಇರ್ಕುಟ್ಸ್ಕ್ ಪ್ಲೇಗ್ ವಿರೋಧಿ ಸಂಶೋಧನಾ ಸಂಸ್ಥೆಯ ಪ್ರಯೋಗಾಲಯ ಸಹಾಯಕಿಯಾಗಿದ್ದರು. ಸೆಪ್ಟೆಂಬರ್ 29 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನ್ಯುಮೋನಿಯಾ ಲಕ್ಷಣಗಳಿದ್ದ ಅವರು ಮೂರು ದಿನಗಳ ನಂತರ ಮೃತಪಟ್ಟರು .
ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ಸುಮಾರು 200 ಜನರನ್ನು ವೈದ್ಯಕೀಯ ನಿಗಾದಲ್ಲಿಡಲಾಗಿತ್ತು. ಇರ್ಕುಟ್ಸ್ಕ್ ಮತ್ತು ಶೆಲೆಖೋವ್ ನಗರಗಳ ಹಲವು ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಘೋಷಿಸಲಾಗಿತ್ತು.
ಎರಡನೇ ಸಾವಿನ ವರದಿ
ಇದೀಗ ಎರಡನೇ ರೋಗಿಯೊಬ್ಬರು ನ್ಯುಮೋನಿಯಾ ಮಾದರಿಯ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ರಷ್ಯಾದ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇರ್ಕುಟ್ಸ್ಕ್ ಪ್ರಾಂತ್ಯದವರೇ ಆದ ಈ ರೋಗಿಯ ಸಾವಿನ ಬಗ್ಗೆ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಆದರೆ, ಎರಡನೇ ರೋಗಿಯ ಸಾವಿನ ಕುರಿತು ಮಾಹಿತಿ ದೃಢೀಕರಿಸಲು ರಷ್ಯಾ ಅಧ್ಯಕ್ಷೀಯ ಕಚೇರಿ ಕ್ರೆಮ್ಲಿನ್ ಸ್ಪಷ್ಟವಾಗಿ ನಕಾರ ಹೇಳಿದೆ. ಎರಡನೇ ರೋಗಿಯ ಸಾವು ಕೇವಲ ವದಂತಿ ಎಂದು ಕ್ರೆಮ್ಲಿನ್ ತಿಳಿಸಿದೆ. ಈ ಮೂಲಕ 2ನೇ ರೋಗಿಯ ಸಾವಿನ ಕುರಿತಾಗಿ ಮಾಹಿತಿ ಮುಚ್ಚಿಡಲು ರಷ್ಯಾ ಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕ್ರೆಮ್ಲಿನ್ ಸ್ಪಷ್ಟನೆ
ಕ್ರೆಮ್ಲಿನ್ ವಕ್ತಾರ ದಿಮಿತ್ರಿ ಪೆಸ್ಕೋವ್ ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದು, “ಈ ಕ್ಷೇತ್ರದಲ್ಲಿ ಸಮರ್ಥ ಸಂಸ್ಥೆ ಎಂದರೆ ರೋಸ್ಪೊಟ್ರೆಬ್ನಾಡ್ಜರ್. ಅಧಿಕೃತ ಹೇಳಿಕೆಗಳನ್ನಷ್ಟೇ ನಂಬಬೇಕು, ವದಂತಿಗಳನ್ನಲ್ಲ” ಎಂದು ಹೇಳಿದ್ದಾರೆ. ರೋಸ್ಪೊಟ್ರೆಬ್ನಾಡ್ಜರ್ ಸಂಸ್ಥೆಯು ಈಗಾಗಲೇ ಸ್ಪಷ್ಟಪಡಿಸಿದಂತೆ, ಮೃತ ಯುವತಿಯ ದೇಹದಲ್ಲಿ ಅವರ ವೃತ್ತಿಪರ ಕೆಲಸಕ್ಕೆ ಸಂಬಂಧಿಸಿದ ಯಾವುದೇ ಸೂಕ್ಷ್ಮಜೀವಿಗಳು ಪತ್ತೆಯಾಗಿಲ್ಲ. ಸಂಸ್ಥೆಯಲ್ಲಿ ಪ್ಲೇಗ್ ರೋಗಾಣುಗಳೊಂದಿಗೆ ಕೆಲಸ ಮಾಡುವಾಗ ಯಾವುದೇ ಅಪಘಾತ ಸಂಭವಿಸಿಲ್ಲ. ಸೋಂಕಿತರ ಸಂಪರ್ಕದಲ್ಲಿದ್ದವರಲ್ಲಿ ಕೆಲವರಿಗೆ ಕೋವಿಡ್-19 ಮತ್ತು ರೈನೋವೈರಸ್ ಸೋಂಕು ಪತ್ತೆಯಾಗಿದೆ ಎಂದು ತಿಳಿಸಲಾಗಿದೆ.
