ಆರ್‌ಸಿಬಿ ಗೆಲುವು: ರಾಜ್ಯದಲ್ಲಿ ಒಂದೇ ದಿನ 157 ಕೋಟಿ ಮದ್ಯ ಮಾರಾಟ!

ಆರ್‌ಸಿಬಿ ಸಂಭ್ರಮದಲ್ಲಿ ಮಿಂಚಿದ ಬಿಯರ್ ಬಾಟಲ್, ಮದ್ಯ!

Befunky collage 2025 06 04t173220.111

ಬೆಂಗಳೂರು: ಐಪಿಎಲ್ 2025ರ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಚೊಚ್ಚಲ ಟ್ರೋಫಿಯನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ನಿನ್ನೆ (ಜೂನ್ 3) ದಿನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 6 ರನ್‌ಗಳ ರೋಮಾಂಚಕ ಗೆಲುವು ಸಾಧಿಸಿದ ಆರ್‌ಸಿಬಿ, 18 ವರ್ಷಗಳ ಕಾಯುವಿಕೆಯನ್ನು ಅಂತ್ಯಗೊಳಿಸಿತು.

ಈ ಗೆಲುವಿನ ಸಂಭ್ರಮದಲ್ಲಿ ಅಭಿಮಾನಿಗಳು ರಾಜ್ಯಾದ್ಯಂತ ‘ಈ ಸಲ ಕಪ್ ನಮ್ದು’ ಎಂಬ ಘೋಷಣೆಯೊಂದಿಗೆ ರಸ್ತೆಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ, ಈ ಖುಷಿಯ ನಡುವೆ ರಾಜ್ಯದಲ್ಲಿ ದಾಖಲೆಯ ಮದ್ಯ ಮಾರಾಟವಾಗಿದ್ದು, ಒಂದೇ ದಿನದಲ್ಲಿ 157.94 ಕೋಟಿ ರೂ. ವಹಿವಾಟು ನಡೆದಿದೆ.

ಫೈನಲ್ ಪಂದ್ಯದ ದಿನವಾದ ಜೂನ್ 3ರಂದು, ರಾಜ್ಯದಲ್ಲಿ 1.48 ಲಕ್ಷ ಬಾಟಲ್ ಬಿಯರ್ ಬಾಕ್ಸ್‌ಗಳು ಮಾರಾಟವಾಗಿ 30.66 ಕೋಟಿ ರೂ. ಆದಾಯ ಗಳಿಸಿವೆ. ಕಳೆದ ವರ್ಷ ಇದೇ ದಿನ ಕೇವಲ 0.36 ಲಕ್ಷ ಬಾಕ್ಸ್‌ಗಳು ಮಾರಾಟವಾಗಿ 6.29 ಕೋಟಿ ರೂ. ಆದಾಯ ಬಂದಿತ್ತು. ಇದರ ಜೊತೆಗೆ, ಇತರ ಆಲ್ಕೋಹಾಲ್‌ಯುಕ್ತ ಮದ್ಯಗಳು 1.28 ಲಕ್ಷ ಬಾಕ್ಸ್‌ಗಳಷ್ಟು ಮಾರಾಟವಾಗಿ 127.88 ಕೋಟಿ ರೂ. ಆದಾಯವನ್ನು ತಂದಿವೆ, ಕಳೆದ ವರ್ಷದ 19.41 ಕೋಟಿ ರೂ.ಗೆ ಹೋಲಿಸಿದರೆ ಇದು ಭಾರೀ ಏರಿಕೆಯಾಗಿದೆ. ಒಟ್ಟಾರೆಯಾಗಿ, ನಿನ್ನೆ ದಿನ ರಾಜ್ಯದಲ್ಲಿ ಮದ್ಯ ಮಾರಾಟದಿಂದ 157.94 ಕೋಟಿ ರೂ. ಆದಾಯ ದಾಖಲಾಗಿದ್ದು, ಕಳೆದ ವರ್ಷದ 25 ಕೋಟಿ ರೂ.ಗಿಂತ 132.24 ಕೋಟಿ ರೂ. ಹೆಚ್ಚಳವಾಗಿದೆ.

ರಜತ್ ಪಾಟಿದಾರ್ ನಾಯಕತ್ವದ ಆರ್‌ಸಿಬಿ ತಂಡ ಇಂದು ಬೆಂಗಳೂರಿಗೆ ಆಗಮಿಸಿದ್ದು, ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಸನ್ಮಾನ ಪಡೆದಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 6:00 ಗಂಟೆಗೆ ವಿಜಯೋತ್ಸವ ಕಾರ್ಯಕ್ರಮ ಆಯೋಜನೆಯಾಗಿದ್ದು, ಅಭಿಮಾನಿಗಳು ‘ಆರ್‌ಸಿಬಿ.. ಕೊಹ್ಲಿ’ ಎಂದು ಕೂಗುತ್ತಾ ಸಂಭ್ರಮದಲ್ಲಿ ಮುಳುಗಿದ್ದಾರೆ. ಆದರೆ, ಈ ಅತಿರೇಕದ ಸಂಭ್ರಮವು ಮದ್ಯ ಮಾರಾಟದಲ್ಲಿ ದಾಖಲೆ ಸೃಷ್ಟಿಸಿದೆ.

Exit mobile version