ಚಿನ್ನಸ್ವಾಮಿ ಕಾಲ್ತುಳಿತ ದುರಂತ: RCB ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಮುಂದಾದ ಸರ್ಕಾರ

111 (11)

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ. ಈ ಘಟನೆಯಲ್ಲಿ 11 ಜನರು ಪ್ರಾಣ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದರು. ಈ ದುರಂತಕ್ಕೆ ಕಾರಣವಾದ ಆರ್‌ಸಿಬಿಯ ನಿರ್ವಹಣೆ ಮತ್ತು ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ ಎಂದು ರಾಜ್ಯ ಸರ್ಕಾರ ಗಂಭೀರ ಆರೋಪ ಮಾಡಿದೆ.

ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದ ಸಮಿತಿಯು ಈ ಘಟನೆಯ ಕುರಿತು ತನಿಖೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಆರ್‌ಸಿಬಿ ಮತ್ತು ಕೆಎಸ್‌ಸಿಎ ವಿರುದ್ಧ ಕಾನೂನು ಕ್ರಮಕ್ಕೆ ಒಪ್ಪಿಗೆ ನೀಡಿದೆ. ಈ ಘಟನೆಯ ತನಿಖೆಗಾಗಿ ಸರ್ಕಾರವು ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಪೊಲೀಸ್ ಇಲಾಖೆಯ ಲೋಪದೋಷಗಳನ್ನು ಎತ್ತಿ ತೋರಿಸಲಾಗಿದೆ.

ಆರ್‌ಸಿಬಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ 18 ವರ್ಷಗಳ ನಂತರ ಪ್ರಶಸ್ತಿಯನ್ನು ಗೆದ್ದಿತ್ತು. ಈ ಗೆಲುವಿನ ಸಂಭ್ರಮವನ್ನು ಆಚರಿಸಲು ಜೂನ್ 4 ರಂದು ತಂಡವು ಬೆಂಗಳೂರಿಗೆ ಆಗಮಿಸಿತ್ತು. ವಿಧಾನಸೌಧದಲ್ಲಿ ಸರ್ಕಾರದ ವತಿಯಿಂದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಳಿಕ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಗೆ ತಂಡ ತೆರಳಿತ್ತು. ಈ ಸಂದರ್ಭದಲ್ಲಿ, ತಮ್ಮ ನೆಚ್ಚಿನ ಆಟಗಾರರನ್ನು ಕಾಣಲು ಜನಸಾಗರವೇ ಕ್ರೀಡಾಂಗಣದ ಬಳಿ ನೆರೆದಿತ್ತು.

ಆದರೆ, ಆರ್‌ಸಿಬಿಯ ಆಡಳಿತವು ಈ ಕಾರ್ಯಕ್ರಮಕ್ಕೆ ಸೂಕ್ತ ಮುಂದಾಲೋಚನೆ ಇಲ್ಲದೆ ಯೋಜನೆ ರೂಪಿಸಿತ್ತು. ಕಾರ್ಯಕ್ರಮಕ್ಕೆ ಅನುಮತಿಯನ್ನು ಮುಂಚಿತವಾಗಿ ಪಡೆಯದಿರುವುದರಿಂದ ಪೊಲೀಸ್ ಇಲಾಖೆಗೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲ. ಕ್ರೀಡಾಂಗಣದ ಗೇಟ್‌ಗಳನ್ನು ತೆರೆಯದಿರುವುದರಿಂದ ಜನರ ದಟ್ಟಣೆಯಿಂದ ಕಾಲ್ತುಳಿತ ಸಂಭವಿಸಿತು. ಈ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡರು.

ತನಿಖಾ ವರದಿಯು ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಆರ್‌ಸಿಬಿಯ ಸಿಬ್ಬಂದಿಯಂತೆ ವರ್ತಿಸಿದ್ದಾರೆ ಎಂದು ಆರೋಪಿಸಿದೆ. ಆರ್‌ಸಿಬಿಯ ಗೆಲುವಿನ ಸಂಭ್ರಮಕ್ಕೆ ಸಂಬಂಧಿಸಿದ ಯಾವುದೇ ಯೋಜನೆಯನ್ನು ಪೊಲೀಸರಿಗೆ ಸೂಕ್ತವಾಗಿ ತಿಳಿಸಲಾಗಿರಲಿಲ್ಲ. ಒಂದು ವೇಳೆ ಮುಂಚಿತವಾಗಿ ಅನುಮತಿ ಪಡೆದಿದ್ದರೆ, ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡಬಹುದಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಏಕಾಏಕಿ ಆಯೋಜಿಸಲಾದ ಕಾರ್ಯಕ್ರಮದಿಂದಾಗಿ ಪೊಲೀಸ್ ಇಲಾಖೆ ಮತ್ತು ಸಂಬಂಧಿತ ಇಲಾಖೆಗಳು ವಿಫಲವಾದವು.

ಈ ಘಟನೆಯಿಂದಾಗಿ ರಾಜ್ಯ ಸರ್ಕಾರವು ಕಾಲ್ತುಳಿತದ ಹೊಣೆಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ನಿರ್ಧರಿಸಿದೆ. ಆರ್‌ಸಿಬಿ ಮತ್ತು ಕೆಎಸ್‌ಸಿಎಗೆ ಸಂಬಂಧಿಸಿದಂತೆ ಕಾನೂನು ಕ್ರಮಕ್ಕೆ ಸೂಚನೆ ನೀಡಲಾಗಿದ್ದು, ಜೊತೆಗೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆಯೂ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.

Exit mobile version