ನವದೆಹಲಿ: ದೇಶದಲ್ಲಿ ಎಲ್‌ಪಿಜಿ (LPG) ಕೊರತೆ ಭೀತಿ ನಡುವೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಇರಾನ್ ನಿಂದ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಎರಡು ಭಾರತೀಯ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಭಾರತದ ಕಡೆಗೆ ಸಾಗುತ್ತಿವೆ ಎಂದು ಹಡಗು ಸಚಿವಾಲಯ ತಿಳಿಸಿದೆ. ಈ ಹಡಗುಗಳು ಮಾರ್ಚ್ 16 ಮತ್ತು 17 ರಂದು ಗುಜರಾತ್‌ನ ಬಂದರುಗಳಿಗೆ ಆಗಮಿಸಲಿವೆ.
ಹಡಗು ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಘಾ ಅವರು ಶನಿವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, “92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತ ಧ್ವಜದ ಎರಡು ಹಡಗುಗಳಾದ ‘ಶಿವಾಲಿಕ್’ ಮತ್ತು ‘ನಂದಾದೇವಿ’ ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿವೆ. ಅವು ಈಗ ಭಾರತದ ಕಡೆಗೆ ಸಾಗುತ್ತಿವೆ” ಎಂದು ತಿಳಿಸಿದ್ದಾರೆ.
ಯಾವ ಬಂದರಿಗೆ ಯಾವಾಗ ಆಗಮನ?
ಈ ಎರಡು ಹಡಗುಗಳ ಪೈಕಿ ಒಂದು ಗುಜರಾತ್‌ನ ಕಾಂಡ್ಲಾ ಬಂದರಿಗೆ ಮತ್ತು ಇನ್ನೊಂದು ಮುಂದ್ರಾ ಬಂದರಿಗೆ ಆಗಮಿಸಲಿವೆ. “ಮುಂದ್ರಾ ಬಂದರಿಗೆ ಮಾರ್ಚ್ 16 ರಂದು ಮತ್ತು ಕಾಂಡ್ಲಾ ಬಂದರಿಗೆ ಮಾರ್ಚ್ 17 ರಂದು ಹಡಗುಗಳು ಆಗಮಿಸಲಿವೆ” ಎಂದು ರಾಜೇಶ್ ಕುಮಾರ್ ಸಿಂಘಾ ಸ್ಪಷ್ಟಪಡಿಸಿದ್ದಾರೆ.
ಪರ್ಷಿಯನ್ ಕೊಲ್ಲಿಯಲ್ಲಿ 22 ಭಾರತೀಯ ಹಡಗುಗಳು
ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ 22 ಭಾರತೀಯ ಧ್ವಜದ ಹಡಗುಗಳು ಇವೆ. ಈ ಎಲ್ಲಾ ಹಡಗುಗಳಲ್ಲಿ ಒಟ್ಟು 611 ಭಾರತೀಯ ನಾವಿಕರು ಸೇವೆ ಸಲ್ಲಿಸುತ್ತಿದ್ದಾರೆ. ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಅವರಿಗೆ ಸಂಬಂಧಿಸಿದ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಸಚಿವಾಲಯದ ವಕ್ತಾರರು ವಿವರಿಸಿದ್ದಾರೆ.
ನಾವಿಕರ ಸುರಕ್ಷತೆಗೆ ಸರ್ಕಾರ ಕ್ರಮ
ಭಾರತೀಯ ಸಿಬ್ಬಂದಿ ಸದಸ್ಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಡಗು ಮಾಲೀಕರೊಂದಿಗೆ ನಿಕಟ ಸಮನ್ವಯದಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಉದ್ರಿಕ್ತ ಪರಿಸ್ಥಿತಿ ನಡುವೆಯೂ ಭಾರತೀಯ ಹಡಗುಗಳು ಮತ್ತು ನಾವಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
ದೇಶದಲ್ಲಿ ಎಲ್‌ಪಿಜಿ ಪೂರೈಕೆಗೆ ಸಂಬಂಧಿಸಿದಂತೆ ಕೆಲ ದಿನಗಳಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅತಿಯಾದ ಬುಕಿಂಗ್ ಮತ್ತು ಪೂರೈಕೆ ಸಮಸ್ಯೆಯ ಭೀತಿಯಿಂದ ಗ್ರಾಹಕರು ಆತಂಕಗೊಂಡಿದ್ದರು. ಈ ನಡುವೆ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗುಗಳು ಶೀಘ್ರದಲ್ಲೇ ಭಾರತ ತಲುಪಲಿವೆ ಎಂಬ ಮಾಹಿತಿಯು ಜನರಿಗೆ ನಿರಾಳತೆ ನೀಡಿದೆ.
