ದಾವಣಗೆರೆ: ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ವಿರುದ್ಧ ಪಕ್ಷದ ಒಳಗಡೆಯೇ ಷಡ್ಯಂತ್ರ ಮತ್ತು ಒಳಸಂಚು ನಡೆಯುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ವೀರಶೈವ ಲಿಂಗಾಯತ ಸಮಾಜದ ಪ್ರಬಲ ಧಾರ್ಮಿಕ ಮುಖಂಡರಾದ ರಂಭಾಪುರಿ ಜಗದ್ಗುರುಗಳು (Rambhapuri Swamy) ವಿಜಯೇಂದ್ರ ಅವರ ಬೆಂಬಲಕ್ಕೆ ನಿಂತು ಮಹತ್ವದ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ವಿಜಯೇಂದ್ರ ಕಡಗಣಿಸಿದ್ರೆ ಪಕ್ಷಕ್ಕೆ ನಷ್ಟವಾಗುತ್ತೆ ಎಂದು ಯಡಿಯೂರಪ್ಪ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಬಿಜೆಪಿ ಹೈಕಮಾಂಡ್‌ಗೆ ಪರೋಕ್ಷವಾಗಿ ಗಂಭೀರವಾದ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ.
ಲಿಂಗಾಯತ ಸಮಾಜ ನಿರ್ಲಕ್ಷ್ಯವೇ ಬಿಜೆಪಿ ಸೋಲಿಗೆ ಕಾರಣ
ವೀರಶೈವ ಲಿಂಗಾಯತ ಸಮುದಾಯವನ್ನು ನಿರ್ಲಕ್ಷಿಸಿದರೆ ಬಿಜೆಪಿಗೆ ಮುಂದಿನ ದಿನಗಳಲ್ಲಿ ನಿರೀಕ್ಷಿತ ರಾಜಕೀಯ ಫಲಿತಾಂಶ ಸಾಧ್ಯವಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ. “ವೀರಶೈವ ಲಿಂಗಾಯತ ಸಮಾಜವನ್ನು ಕಡೆಗಣಿಸಿ, ಬೇರೆಯವರಿಗೆ ಆ ಪಟ್ಟ ಕಟ್ಟಲು ಯತ್ನಿಸಿದರೆ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಹಿಂದೆ ನಡೆದ ಚುನಾವಣೆಗಳಲ್ಲಿ ಸಮುದಾಯದ ನಿರ್ಲಕ್ಷ್ಯದಿಂದ ಪಕ್ಷ ಎದುರಿಸಿದ ದುಷ್ಪರಿಣಾಮವೇ ಮುಂದೆಯೂ ಮರುಕಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ” ಎಂದು ಅವರು ಎಚ್ಚರಿಸಿದರು.
ಯಡಿಯೂರಪ್ಪ ಅವರ ಕೊಡುಗೆಯನ್ನು ನೆನಪಿಸಿದ ಶ್ರೀಗಳು
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಶ್ರಮವೇ ಕಾರಣ ಎಂಬುದನ್ನು ಜಗದ್ಗುರುಗಳು ನೆನಪಿಸಿದರು. “ಕೇವಲ ಇಬ್ಬರು ಶಾಸಕರಿದ್ದ ಕಾಲದಿಂದ ಪಕ್ಷವನ್ನು ಕಟ್ಟಿ ಇಡೀ ಶಾಸನಸಭೆಯಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ” ಎಂದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಎಲ್ಲಾ ಸಮುದಾಯದ ಜನರ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದರು. “ಯಾವುದೇ ಮುಖ್ಯಮಂತ್ರಿಯೂ ಮಾಡದ ರೀತಿಯಲ್ಲಿ ಎಲ್ಲಾ ಸಮುದಾಯಗಳ ಧಾರ್ಮಿಕ ಕೇಂದ್ರಗಳಿಗೆ ಮುಕ್ತವಾಗಿ ಅನುದಾನ ನೀಡಿ ನಾಡಿನ ಪ್ರಗತಿಗೆ ಶ್ರಮಿಸಿದ್ದರು” ಎಂದು ಶ್ಲಾಘಿಸಿದರು. ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಕೆಲಸ ಮಾಡಿದ ವ್ಯಕ್ತಿ ಯಡಿಯೂರಪ್ಪ ಎಂದು ಅವರು ಹೇಳಿದರು.
ನಾಲ್ಕು ಬಾರಿ ಸಿಎಂ ಆದರೂ ಪೂರ್ಣಾವಧಿ ಅವಕಾಶವಿಲ್ಲ
ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾದರೂ ಅವರಿಗೆ ಪೂರ್ಣಾವಧಿ ಅಧಿಕಾರ ನಡೆಸಲು ಪಕ್ಷದ ಒಳಗಿನವರೇ ಅವಕಾಶ ಕೊಡಲಿಲ್ಲ ಎಂಬ ಬೇಸರವನ್ನು ಶ್ರೀಗಳು ವ್ಯಕ್ತಪಡಿಸಿದರು. “ಅವರು ಅಧಿಕಾರ ನಡೆಸುವ ಕಾಲದಲ್ಲಿ ಕಾಲು ಎಳೆಯುವ ಜನರು ಇದ್ದರು. ಆದರೆ ಅದಕ್ಕೆ ಸೊಪ್ಪು ಹಾಕದೆ ದೃಢ ನಿರ್ಧಾರದಿಂದ ಅಧಿಕಾರ ನಡೆಸಿಕೊಂಡು ಬಂದರು” ಎಂದರು.
ವಿಜಯೇಂದ್ರ ವಿರುದ್ಧವೂ ಅದೇ ಪಿತೂರಿ
“ಈಗ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕವೂ ಮತ್ತೆ ಅಂತಹದ್ದೇ ಒಳಸಂಚು ಹಾಗೂ ಪಿತೂರಿಗಳು ಆರಂಭವಾಗಿವೆ” ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು. ವಿಜಯೇಂದ್ರ ವಿರೋಧಿಗಳಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಅವರು, “ಸಮುದಾಯದ ಬೆಂಬಲವಿಲ್ಲದೆ ಬಿಜೆಪಿಯ ಭವಿಷ್ಯ ಕತ್ತಲೆಯಾಗಲಿದೆ” ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಗುಂಪುಗಾರಿಕೆ ಬಗ್ಗೆ ಅಸಮಾಧಾನ
ಪ್ರಸ್ತುತ ಬಿಜೆಪಿಯಲ್ಲಿ ಎರಡು-ಮೂರು ಗುಂಪುಗಳಿರುವುದು ಎದ್ದುಕಾಣುತ್ತಿದೆ ಎಂದ ಅವರು, “ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಹೋದರೆ ಮಾತ್ರ ಜನರಲ್ಲಿ ಪಕ್ಷದ ಬಗ್ಗೆ ಆಶಾದಾಯಕ ಭಾವನೆ ಮೂಡಲು ಸಾಧ್ಯ. ಹೀಗೆ ನಾಯಕರು ತಮ್ಮತಮ್ಮಲ್ಲೇ ತಿಕ್ಕಾಡುತ್ತಾ ಹೋದರೆ ಅದರ ನೇರ ಲಾಭವನ್ನು ವಿರೋಧ ಪಕ್ಷಗಳು ಪಡೆಯಲಿವೆ” ಎಂದು ಎಚ್ಚರಿಸಿದರು.
“ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲಾ ವರ್ಗದ ಜನರ ಹಿತವನ್ನು ಕಾಪಾಡುವಂತಹ ರಾಜಕೀಯ ಮುತ್ಸದ್ದಿಗಳ ಅವಶ್ಯಕತೆ ತುಂಬಾ ಇದೆ. ಪಕ್ಷದಲ್ಲಿರುವ ಗೊಂದಲಗಳನ್ನು ಬಗೆಹರಿಸಿ, ಸಮರ್ಥರನ್ನು ಮುನ್ನಡೆಸುವ ಜವಾಬ್ದಾರಿಯನ್ನು ಬಿಜೆಪಿಯ ರಾಷ್ಟ್ರೀಯ ನಾಯಕರು ವಹಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ರಾಮ ಮಂದಿರ ದೇಣಿಗೆ ದುರ್ಬಳಕೆ ವಿಚಾರ
ರಾಮ ಮಂದಿರ ದೇಣಿಗೆ ದುರ್ಬಳಕೆಯ ಬಗ್ಗೆಯೂ ಶ್ರೀಗಳು ಸ್ಪಷ್ಟನೆ ನೀಡಿದರು. “ಎಲ್ಲಾ ವರ್ಗದ ಜನರು ರಾಮ ಮಂದಿರ ನಿರ್ಮಾಣಕ್ಕೆ ಧನ ಸಹಾಯ ಮಾಡಿದ್ದಾರೆ. ಅಲ್ಲಿರುವ ಕೆಲವು ಜನರು ಅಡ್ಡದಾರಿಯಲ್ಲಿ ಹೋಗಿ ಹಣ ದುರುಪಯೋಗ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇಂತಹ ಪವಿತ್ರ ಸ್ಥಳದಲ್ಲಿ ಈ ರೀತಿ ಕೆಲಸಗಳು ಆಗಬಾರದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ವಿಧಿಸಬೇಕು. ಹಣವನ್ನು ಅವರಿಂದ ವಸೂಲಿ ಮಾಡಿ ಮಂದಿರಕ್ಕೆ ವಾಪಸ್ಸು ಕೊಡಿಸುವ ಕೆಲಸವಾಗಬೇಕು” ಎಂದು ಆಗ್ರಹಿಸಿದರು.
ರಂಭಾಪುರಿ ಶ್ರೀಗಳ ಈ ಹೇಳಿಕೆಯು ಬಿಜೆಪಿ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಲಿಂಗಾಯತ ಸಮಾಜದ ಬೆಂಬಲದ ಮೇಲೆಯೇ ಬಿಜೆಪಿಯ ರಾಜಕೀಯ ಭವಿಷ್ಯವಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದು, ಇದು ವಿಜಯೇಂದ್ರ ವಿರೋಧಿಗಳಿಗೆ ತೀವ್ರ ಎಚ್ಚರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಹೈಕಮಾಂಡ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
