ಮೈಸೂರು ಕೋರ್ಟ್‌ಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ

ಅಲರ್ಟ್ (13)

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ನ್ಯಾಯಾಲಯ ಸಂಕೀರ್ಣಗಳಿಗೆ ಬಾಂಬ್ (Bomb) ಇಟ್ಟಿರುವುದಾಗಿ ಕಿಡಿಗೇಡಿಗಳು ಇ-ಮೇಲ್ (E-mail) ಮೂಲಕ ಬೆದರಿಕೆ ಹಾಕಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಮೈಸೂರು ನಗರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.

ಯಾವ ಕೋರ್ಟ್‌ಗಳಿಗೆ ಬೆದರಿಕೆ?

ಮೈಸೂರಿನ ಜಯನಗರದಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣ ಹಾಗೂ ಚಾಮರಾಜಪುರಂನಲ್ಲಿರುವ ಹಳೇ ಕೋರ್ಟ್ ಆವರಣ ಎರಡರಲ್ಲೂ ಏಕಕಾಲಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಈ ಎರಡೂ ನ್ಯಾಯಾಲಯ ಆವರಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ರಕ್ಷಣಾ ಪಡೆಗಳ ಶೋಧ ಕಾರ್ಯಾಚರಣೆ

ಮಾಹಿತಿ ತಿಳಿದ ಕೂಡಲೇ ಜಯನಗರ ಮತ್ತು ಚಾಮರಾಜಪುರಂನ ಎರಡೂ ನ್ಯಾಯಾಲಯ ಸಂಕೀರ್ಣಗಳಿಗೆ ಎಸಿಪಿ ಕೆ.ಸಿ. ಪ್ರಕಾಶ್, ಇನ್ಸ್‌ಪೆಕ್ಟರ್ ಬಿ.ಎಸ್. ರವಿಶಂಕರ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಅವರೊಂದಿಗೆ ಸ್ಪೋಟಕ ಪತ್ತೆ ದಳ (BDDS) ಹಾಗೂ ಶ್ವಾನ ದಳ (Dog Squad) ಸಿಬ್ಬಂದಿ ಕೂಡ ಆಗಮಿಸಿದ್ದಾರೆ. ತಂಡಗಳು ಕೋರ್ಟ್ ಕೊಠಡಿಗಳು, ಕಾರಿಡಾರ್, ವಾಹನ ನಿಲ್ದಾಣ, ಶೌಚಾಲಯಗಳು ಸೇರಿದಂತೆ ಪ್ರತಿಯೊಂದು ಮೂಲೆಯನ್ನೂ ಜಾಲಾಡುತ್ತಿವೆ. ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಸಿ ಬಾಂಬ್ ಬೆದರಿಕೆಯೇ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಮತ್ತು ಆತಂಕ ಸೃಷ್ಟಿಸುವ ಉದ್ದೇಶದಿಂದ ಕಿಡಿಗೇಡಿಗಳು ಇಂತಹ ಇ-ಮೇಲ್ ಕಳುಹಿಸಿದ್ದು, ಇದು ಹುಸಿ ಬಾಂಬ್ ಬೆದರಿಕೆ (Hoax Bomb Threat) ಇರಬಹುದು ಎನ್ನಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ತಪಾಸಣೆ ಮುಂದುವರಿಸಿದೆ. 

ಮೈಸೂರಿಗೆ ಇದೇ ಮೊದಲಲ್ಲ!

ಮೈಸೂರಿನಲ್ಲಿ ನ್ಯಾಯಾಲಯಕ್ಕೆ ಇಂತಹ ಇ-ಮೇಲ್ ಬೆದರಿಕೆ ಬರುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ತಿಂಗಳ ಹಿಂದೆಯೂ ಇದೇ ಮಾದರಿಯಲ್ಲಿ ನ್ಯಾಯಾಲಯಕ್ಕೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ಆಗ ಕೂಡ ಪೊಲೀಸರು ವ್ಯಾಪಕ ಪರಿಶೀಲನೆ ನಡೆಸಿದ್ದರು.

ಕಳೆದ ವಾರ ಹೋಟೆಲ್‌ಗಳಿಗೆ ಬಂದಿತ್ತು ಬೆದರಿಕೆ!

ಮೈಸೂರಿನಲ್ಲಿ ಕಳೆದ ವಾರವಷ್ಟೇ ಎರಡು ಪ್ರಮುಖ ಖಾಸಗಿ ಹೋಟೆಲ್‌ಗಳಿಗೆ ಬಾಂಬ್ ಇಟ್ಟಿರುವುದಾಗಿ ಇದೇ ರೀತಿ ಇ-ಮೇಲ್ ಬರಲಾಗಿತ್ತು. ಅಂದು ಕೂಡ ಪೊಲೀಸರು ಮತ್ತು ಬಾಂಬ್ ಪತ್ತೆ ದಳದವರು ಹೋಟೆಲ್‌ನ ಇಂಚಿಂಚೂ ತಪಾಸಣೆ ನಡೆಸಿದಾಗ ಅದು ಹುಸಿ ಬಾಂಬ್ ಕರೆ ಎಂಬುದು ದೃಢಪಟ್ಟಿತ್ತು. 

ಸೈಬರ್ ಕ್ರೈಂ ಪೊಲೀಸರ ತನಿಖೆ

ಇ-ಮೇಲ್ ಹಿಂದೆ ಯಾರಿದ್ದಾರೆ ಮತ್ತು ಪದೇ ಪದೇ ಮೈಸೂರನ್ನು ಬೆದರಿಸುತ್ತಿರುವ ಈ ಕಿಡಿಗೇಡಿಗಳ ಜಾಲ ಯಾವುದು ಎಂಬುದರ ಪತ್ತೆಗೆ ಸೈಬರ್ ಕ್ರೈಂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇ-ಮೇಲ್ ಐಪಿ ವಿಳಾಸ, ಸರ್ವರ್ ವಿವರಗಳು ಮತ್ತು ಇತರೆ ಡಿಜಿಟಲ್ ಕುರುಹುಗಳ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅಪರಿಚಿತರ ಸಿಮ್ ಕಾರ್ಡ್ ಅಥವಾ ವಿಪಿಎನ್ (VPN) ಬಳಸಿ ಇ-ಮೇಲ್ ಕಳುಹಿಸಿರುವ ಸಾಧ್ಯತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version