ಇಂದು ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆಯೇ ರಂಜಾನ್ ಆಚರಣೆ..!

Untitled design 2026 03 19T222141.833

ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ರಂಜಾನ್ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಶವ್ವಾಲ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ, ಒಂದು ತಿಂಗಳ ಕಾಲ ನಡೆದ ಪವಿತ್ರ ರಂಜಾನ್ ಉಪವಾಸ ವ್ರತಕ್ಕೆ ಇಂದು ತೆರೆ ಬಿದ್ದಿದೆ. ನಾಳೆ (ಶುಕ್ರವಾರ) ಕರಾವಳಿಯಾದ್ಯಂತ ಅತ್ಯಂತ ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಲಾಗುವುದು ಎಂದು ಘೋಷಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಖಾಜಿ ಅಲ್ ಹಾಜ್ ತ್ವಾಕಾ ಅಹಮದ್ ಮುಸ್ಲಿಯಾರ್ ಅವರು ಇಂದು ಸಂಜೆ ಚಂದ್ರ ದರ್ಶನವಾಗಿರುವುದನ್ನು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು ರಂಜಾನ್ ಹಬ್ಬವನ್ನು ಆಚರಿಸುವಂತೆ ಸಮುದಾಯಕ್ಕೆ ಕರೆ ನೀಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಬಾಂಧವರು ಕಠಿಣ ಉಪವಾಸ ವ್ರತವನ್ನು (ರೋಜಾ) ಆಚರಿಸುತ್ತಾ, ಪ್ರಾರ್ಥನೆ ಮತ್ತು ದಾನಧರ್ಮಗಳಲ್ಲಿ ತೊಡಗಿದ್ದರು. ಈಗ ಚಂದ್ರ ದರ್ಶನದೊಂದಿಗೆ ಈ ಪವಿತ್ರ ಮಾಸಕ್ಕೆ ಮಂಗಳ ಹಾಡಲಾಗಿದ್ದು, ಹಬ್ಬದ ಸಂಭ್ರಮ ಮನೆಮಾಡಿದೆ.

ಹಬ್ಬದ ಪ್ರಯುಕ್ತ ನಾಳೆ ಬೆಳಗ್ಗೆ ಮಂಗಳೂರು ಮತ್ತು ಉಡುಪಿಯ ಈದ್ಗಾ ಮೈದಾನ ಹಾಗೂ ಪ್ರಮುಖ ಮಸೀದಿಗಳಲ್ಲಿ ವಿಶೇಷ ಈದ್ ಪ್ರಾರ್ಥನೆ ನಡೆಯಲಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುತ್ತಿದ್ದು, ಬಟ್ಟೆ, ಹಣ್ಣು-ಹಂಪಲು ಹಾಗೂ ಸಿಹಿ ಪದಾರ್ಥಗಳ ಖರೀದಿಯಲ್ಲಿ ಜನರು ಮಗ್ನರಾಗಿದ್ದಾರೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸೌಹಾರ್ದತೆಯ ಹಬ್ಬವನ್ನು ಆಚರಿಸಲು ಕರಾವಳಿ ಜನತೆ ಸಜ್ಜಾಗಿದ್ದಾರೆ.

Exit mobile version