ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದಿನಿಂದ (ಮೇ 4) ಆರಂಭಗೊಂಡಿದೆ. ನಿಗದಿತ ಸಮಯದಂತೆ ಬೆಳಿಗ್ಗೆ 8 ಗಂಟೆಗೆ ಅಂಚೆ ಮತಗಳ (Postal Ballots) ಎಣಿಕೆ ಆರಂಭವಾಗಿದ್ದು, ಎರಡು ಕ್ಷೇತ್ರಗಳಲ್ಲಿ ತಲಾ ಒಂದು ಪ್ರಮುಖ ಪಕ್ಷಗಳು ಆರಂಭಿಕ ಮುನ್ನಡೆ ಸಾಧಿಸಿವೆ.
ದಾವಣಗೆರೆಯಲ್ಲಿ ಕಾಂಗ್ರೆಸ್‌ಗೆ ಆರಂಭಿಕ ಜಯ :
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ್ ಅವರು ಬಿಜೆಪಿಯ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ. ಶಾಮನೂರು ಕುಟುಂಬದ ಭದ್ರಕೋಟೆಯಲ್ಲಿ ಕಾಂಗ್ರೆಸ್ ತನ್ನ ಹಿಡಿತವನ್ನು ಅಂಚೆ ಮತಗಳ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದೆ.
ಬಾಗಲಕೋಟೆಯಲ್ಲಿ ಅರಳಿದ ಕಮಲ :
ಇನ್ನೊಂದೆಡೆ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಅಂಚೆ ಮತಗಳ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ನ ಉಮೇಶ್ ಮೇಟಿ ಅವರಿಗೆ ಇಲ್ಲಿ ಆರಂಭಿಕ ಹಿನ್ನಡೆಯಾಗಿದ್ದು, ಬಿಜೆಪಿ ಪಾಳಯದಲ್ಲಿ ಉತ್ಸಾಹ ಮನೆಮಾಡಿದೆ.
ಮುಂದಿನ ಹಂತ ಇವಿಎಂ ಎಣಿಕೆ :
ಅಂಚೆ ಮತಗಳ ಎಣಿಕೆ ಮುಗಿದ ತಕ್ಷಣವೇ ಇವಿಎಂ (EVM) ಯಂತ್ರಗಳ ಮತ ಎಣಿಕೆ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಪೂರ್ಣ ಪ್ರಮಾಣದ ಫಲಿತಾಂಶ ಲಭ್ಯವಾಗಲಿದ್ದು, ಎರಡೂ ಕ್ಷೇತ್ರಗಳಲ್ಲಿ ಅಂತಿಮವಾಗಿ ಯಾರಿಗೆ ಜಯ ಸಿಗಲಿದೆ ಎಂಬುದು ಸ್ಪಷ್ಟವಾಗಲಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಎಣಿಕೆ ಕಾರ್ಯ ಸುಗಮವಾಗಿ ಸಾಗುತ್ತಿದೆ.
