ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಜೆಡಿಎಸ್ ಕೈಗೊಂಡಿರುವ ಬೃಹತ್ ಪಾದಯಾತ್ರೆ ರಾಮನಗರ ಜಿಲ್ಲೆಯಲ್ಲಿ ರಾಜಕೀಯವಾಗಿ ಹಾಗೂ ರೈತ ಹೋರಾಟದ ದೃಷ್ಟಿಯಿಂದ ಗಮನ ಸೆಳೆದಿದೆ. ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, “ಇದು ಕೇವಲ ಆರಂಭ ಮಾತ್ರ, ಮುಂದೆ ಇನ್ನೂ ದೊಡ್ಡ ಮಟ್ಟದ ಹೋರಾಟ ನಡೆಯಲಿದೆ” ಎಂದು ಹೇಳಿದ್ದಾರೆ.
ಬೆಳಿಗ್ಗೆ ಅಂಚಿಪುರ ಗ್ರಾಮದ ದಂಡಿನ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆಗೆ ಚಾಲನೆ ನೀಡಿದರು. ನಂತರ ಅಂಚಿಪುರ, ಅಂಚಿಪುರ ಕಾಲೋನಿ, ಬನ್ನಿಗಿರಿ, ಮೆರೆವೇಗೌಡನದೊಡ್ಡಿ, ಗುಂಡುತೋಪು, ಗೊಲ್ಲಹಳ್ಳಿ, ಕೋಡಿಪಾಳ್ಯ ಹಾಗೂ ಹೊಸೂರು ಗ್ರಾಮಗಳ ಮೂಲಕ ಯಾತ್ರೆ ಸಾಗಿತು.
ಈ ಹೋರಾಟದಲ್ಲಿ ಸಾವಿರಾರು ರೈತರು, ಜೆಡಿಎಸ್ ಕಾರ್ಯಕರ್ತರು ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಜೆಡಿಎಸ್ ನಾಯಕರುಗಳಾದ ಎಂಎಲ್‌ಸಿ ಜವರಾಯಿಗೌಡ ಹಾಗೂ ಮಾಜಿ ಎಂಎಲ್‌ಸಿ ಶ್ರೀಕಂಠೇಗೌಡ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಜನಸಮೂಹದ ಬೆಂಬಲದ ನಡುವೆ ಈ ಹೋರಾಟವು ರೈತರ ಭೂಮಿ ರಕ್ಷಣೆಯ ಹೋರಾಟವಾಗಿ ರೂಪುಗೊಂಡಿದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಈ ಪಾದಯಾತ್ರೆ ರಾಜಕೀಯ ಲಾಭ-ನಷ್ಟಕ್ಕಾಗಿ ಅಲ್ಲ, ರೈತರ ಬದುಕು ಉಳಿಸುವ ಉದ್ದೇಶದಿಂದ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. “ಇದು ಒಂದು ದಿನದ ಹೋರಾಟವಲ್ಲ. ಕೇವಲ ಭಾಷಣಕ್ಕೆ ಸೀಮಿತವಾಗುವ ಕಾರ್ಯಕ್ರಮವೂ ಅಲ್ಲ. ಇದು ಆರಂಭ ಮಾತ್ರ. ರೈತರ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ನಾವು ಸಹಿಸುವುದಿಲ್ಲ” ಎಂದರು.
ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ, ಟೌನ್‌ಶಿಪ್ ಯೋಜನೆಗಾಗಿ ರೈತರಿಗೆ ಆಮಿಷ ಒಡ್ಡಲಾಗುತ್ತಿದೆ ಎಂದು ಹೇಳಿದರು. ಕೃಷಿ ಭೂಮಿ ಕಳೆದುಕೊಂಡರೆ ಸಣ್ಣ ರೈತರ ಬದುಕು ಸಂಕಷ್ಟಕ್ಕೆ ಸಿಲುಕುತ್ತದೆ. ಯೋಜನೆಯ ಮೂಲಕ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳ ಪಾತ್ರ ಹೆಚ್ಚುತ್ತಿದೆ ಮತ್ತು ರೈತರ ಒಗ್ಗಟ್ಟನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಇದೇ ವೇಳೆ ಯೋಜನೆಯ ಅಂದಾಜು ವೆಚ್ಚ 18 ಸಾವಿರ ಕೋಟಿ ರೂ. ಎಂದು ಹೇಳಲಾಗುತ್ತಿದ್ದು, ರೈತರ ಜಮೀನು ಪಡೆದು ಸುಮಾರು 33 ಸಾವಿರ ಕೋಟಿ ರೂ. ಲಾಭ ಪಡೆಯುವ ಉದ್ದೇಶ ಇದೆ ಎಂಬ ಪ್ರಶ್ನೆಯನ್ನು ಅವರು ಸರ್ಕಾರದ ಮುಂದಿಟ್ಟರು.
ಕುಟುಂಬದ ಭೂಮಿಗೆ ಸಂಬಂಧಿಸಿದ ಆರೋಪಗಳಿಗೆ ಪ್ರತಿಕ್ರಿಯಿಸಿದ ನಿಖಿಲ್, ತಮ್ಮ ಕುಟುಂಬದ ಜಮೀನುಗಳನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಲ್ಲ ಎಂದು ಹೇಳಿದ ಅವರು, ಅಗತ್ಯವಿದ್ದರೆ ಶಾಲೆ ಅಥವಾ ಆಸ್ಪತ್ರೆಗಾಗಿ ಜಮೀನು ನೀಡಲು ಸಿದ್ಧವಿದ್ದೇವೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮಾತನಾಡಿ, ಈ ಯೋಜನೆ ರೈತ ವಿರೋಧಿ ಎಂದು ಆರೋಪಿಸಿದರು. ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ ಅವರು, ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು. ಎಚ್.ಡಿ. ದೇವೇಗೌಡ ಅವರ ಆಶೀರ್ವಾದ ಈ ಹೋರಾಟಕ್ಕೆ ಇದೆ. ಜೊತೆಗೆ ಮುಖ್ಯಮಂತ್ರಿ ಅವರಿಗೆ ಶೀಘ್ರದಲ್ಲೇ ಪತ್ರ ಬರೆಯಲಾಗುವುದು, ಯೋಜನೆ ಕೈಬಿಡದಿದ್ದರೆ ಸ್ವತಃ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಕೆ ನೀಡಲಾಗುತ್ತದೆ ಎಂದರು.
