ಬೆಂಗಳೂರು: ಕಾಂಗ್ರೆಸ್‌ನ ಪ್ರಮುಖ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 1,00,250 ಮತಗಳ್ಳತನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಶಾಮೀಲಾಗಿ ಚುನಾವಣೆಯನ್ನು ಕದಿಯಲು ಸಹಕರಿಸಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಕ್ಕೆ ಪ್ರತಿಕ್ರಿಯೆಯಾಗಿ, ಕರ್ನಾಟಕ ಬಿಜೆಪಿಯು ರಾಹುಲ್ ಗಾಂಧಿಗೆ 13 ಕಠಿಣ ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಸಾಮಾಜಿಕ ಅನ್ಯಾಯದ ವಿಷಯಗಳನ್ನು ಎತ್ತಿಹಿಡಿದಿರುವ ಬಿಜೆಪಿ, ರಾಹುಲ್‌ರಿಂದ ಉತ್ತರದ ನಿರೀಕ್ಷೆಯಲ್ಲಿದೆ.
ಬಿಜೆಪಿಯ 13 ಪ್ರಶ್ನೆಗಳಾವುವು?
-
ವಾಲ್ಮೀಕಿ ನಿಗಮ ಹಗರಣ: ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಕಾಂಗ್ರೆಸ್ ಚುನಾವಣಾ ಖರ್ಚಿಗಾಗಿ ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಣವನ್ನು ದುರುಪಯೋಗ ಮಾಡಿರುವ ಬಗ್ಗೆ ಇಡಿ ತನಿಖೆಯಿಂದ ಬಯಲಾಗಿದೆ. ಸಚಿವ ನಾಗೇಂದ್ರ ರಾಜೀನಾಮೆಯನ್ನು ಹೊರತುಪಡಿಸಿ ಯಾವುದೇ ಕ್ರಮ ಕೈಗೊಂಡಿಲ್ಲ. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಪಕ್ಷದ ಫಂಡ್‌ಗೆ ಬಳಸಿದ್ದಕ್ಕೆ ಕ್ಷಮೆಯಾಚಿಸುವಿರಾ?
-
ಭ್ರಷ್ಟಾಚಾರದ ಆರೋಪಗಳು: ಮುಡಾ ಹಗರಣ, ಕಾರ್ಮಿಕ ಕಿಟ್ ಹಗರಣ, ವಸತಿ ಹಗರಣ, ಅಬಕಾರಿ ಲೈಸೆನ್ಸ್ ನವೀಕರಣ ಹಗರಣ, ವೈನ್ ವ್ಯಾಪಾರಿಗಳಿಂದ 200 ಕೋಟಿ ರೂ. ಲಂಚಕ್ಕೆ ಬೇಡಿಕೆ ಇವೆಲ್ಲವೂ ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರದ ಮಾರುಕಟ್ಟೆ ತೆರೆದಿದೆಯೇ?
-
ಪರಿಶಿಷ್ಟರಿಗೆ ದ್ರೋಹ: 40 ಸಾವಿರ ಕೋಟಿ ರೂ. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಾದ ಅನುದಾನವನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ವಿನಿಯೋಗಿಸಿ, ನಿಮ್ಮ ಸರ್ಕಾರ ಪರಿಶಿಷ್ಟ ಸಮುದಾಯಕ್ಕೆ ದ್ರೋಹ ಬಗೆದಿದೆ. ಇದಕ್ಕಾಗಿ ಕ್ಷಮೆಯಾಚಿಸುವಿರಾ? ಯಾವಾಗ ಹಣವನ್ನು ಹಿಂದಿರುಗಿಸುವಿರಿ?
-
ಸಂವಿಧಾನ ಬದಲಾವಣೆ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲು ಸಂವಿಧಾನವನ್ನೇ ಬದಲಾಯಿಸುವುದಾಗಿ ಹೇಳಿದ್ದಾರೆ. ಈ ಹೇಳಿಕೆಗೆ ನಿಮ್ಮ ಸಹಮತವಿದೆಯೇ? ಬಾಬಾಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನ ಬದಲಾಯಿಸಲು ಪ್ರಯತ್ನಿಸಿದ್ದಕ್ಕೆ ಕ್ಷಮೆಯಾಚಿಸುವಿರಾ?
-
ಬೆಲೆ ಏರಿಕೆ: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ವಿದ್ಯುತ್, ಹಾಲು, ಇಂಧನ ಮತ್ತು ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರಿಗೆ ಈ ಬೆಲೆ ಏರಿಕೆಯ ಬರೆ ಎಳೆದಿದ್ದಕ್ಕೆ ಕ್ಷಮೆಯಾಚಿಸುವಿರಾ?
-
ಶಿಕ್ಷಣ ಇಲಾಖೆ ವೈಫಲ್ಯ: ಕನ್ನಡ ಓದಲು, ಬರೆಯಲು ಬಾರದ ಸಚಿವರಿಗೆ ಶಿಕ್ಷಣ ಖಾತೆ ನೀಡಿದ್ದರಿಂದ ಶಿಕ್ಷಣ ಇಲಾಖೆ ದಿವಾಳಿಯಾಗಿದೆ. ಮಕ್ಕಳಿಗೆ ಶೂ, ಸಾಕ್ಸ್, ಸಮವಸ್ತ್ರಕ್ಕೂ ಹಣವಿಲ್ಲ. ಬಿಜೆಪಿ ಆಡಳಿತದಲ್ಲಿ ತುಂಬಿದ್ದ ಬೊಕ್ಕಸವನ್ನು ಬರಿದುಗೊಳಿಸಿದ್ದಕ್ಕೆ ಕನ್ನಡಿಗರಿಂದ ಕ್ಷಮೆಯಾಚಿಸುವಿರಾ?
-
ಆಂತರಿಕ ಭದ್ರತೆ ಲೋಪ: ಕಾಂಗ್ರೆಸ್ ಆಡಳಿತದಲ್ಲಿ ಮಾದಕ ದ್ರವ್ಯ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಿವೆ. ಗುಜರಾತ್ ಎಟಿಎಸ್ ಬೆಂಗಳೂರಿನಲ್ಲಿ ಅಲ್-ಖೈದಾ ಉಗ್ರನನ್ನು ಬಂಧಿಸಿತು, ಮುಂಬೈ ಪೊಲೀಸರು ಮೈಸೂರಿನಲ್ಲಿ ಮಾದಕ ದ್ರವ್ಯ ಘಟಕವನ್ನು ಪತ್ತೆ ಮಾಡಿದರು. ಕರ್ನಾಟಕ ಪೊಲೀಸರಿಗೆ ಇದು ಗೊತ್ತಿಲ್ಲ. ಗುಪ್ತಚರ ವೈಫಲ್ಯಕ್ಕೆ ಕ್ಷಮೆಯಾಚಿಸುವಿರಾ?
-
ಮಹಿಳೆಯರ ಮೇಲಿನ ದೌರ್ಜನ್ಯ: ಎಸ್‌ಟಿ ಮತ್ತು ಹಿಂದುಳಿದ ಸಮುದಾಯದ ಮಹಿಳೆಯರ ಮೇಲಿನ ದೌರ್ಜನ್ಯ ತಾಂಡವವಾಡುತ್ತಿದೆ. ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ನಡೆದ ಘಟನೆಗಳಿಗೆ ಇದುವರೆಗೂ ನ್ಯಾಯ ಸಿಕ್ಕಿಲ್ಲ, ಆರೋಪಿಗಳ ಬಂಧನವಾಗಿಲ್ಲ. ಈ ಮೌನವನ್ನು ಯಾವಾಗ ಮುರಿಯುವಿರಿ?
-
ಗಲಭೆಕೋರರಿಗೆ ಬೆಂಬಲ: ಡಿಜೆ ಹಳ್ಳಿ, ಕೆಜಿ ಹಳ್ಳಿ, ಉದಯಗಿರಿಯ ಗಲಭೆ ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂತೆಗೆದುಕೊಂಡಿದೆ. ಕಾನೂನು ಉಲ್ಲಂಘಕರಿಗೆ ಬೆಂಬಲವೋ ಅಥವಾ ಕಾನೂನು ಪಾಲಕರಿಗೆ ಬೆಂಬಲವೋ? ಗಲಭೆಕೋರರಿಗೆ ಬೆಂಬಲ ನೀಡಿದ್ದಕ್ಕೆ ಕ್ಷಮೆಯಾಚಿಸುವಿರಾ?
-
ರೈತ ವಿರೋಧಿ ಧೋರಣೆ: ಕಾಳಸಂತೆಯಲ್ಲಿ ಗೊಬ್ಬರ ಮಾರಾಟದಿಂದ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಚಿವರು “ನಾಟ್ ರೀಚೆಬಲ್” ಎಂದಿದ್ದಾರೆ. ರೈತರಿಂದ ಕ್ಷಮೆಯಾಚಿಸುವಿರಾ?
-
ಬೆಂಗಳೂರಿನ ದುರವಸ್ಥೆ: ಸಿಲಿಕಾನ್ ಸಿಟಿ ಬೆಂಗಳೂರು ಗುಂಡಿಗಳಿಂದ ಕೂಡಿದೆ. ಅರ್ಧಕ್ಕೆ ನಿಂತ ಫ್ಲೈಓವರ್‌ಗಳು, ಹಾಳಾದ ಪಾದಚಾರಿ ಮಾರ್ಗಗಳಿಂದ ಬೆಂಗಳೂರು ನರಕವಾಗಿದೆ. ಡಿಸಿಎಂ ಶಿವಕುಮಾರ್‌ಗೆ ಅಭಿವೃದ್ಧಿಗಿಂತ ಸಿಎಂ ಕುರ್ಚಿ ಮೇಲೆ ಗಮನ. ಬೆಂಗಳೂರಿಗರಿಂದ ಕ್ಷಮೆಯಾಚಿಸುವಿರಾ?
-
ಆರ್‌ಸಿಬಿ ದುರಂತ: ಆರ್‌ಸಿಬಿ ವಿಜಯೋತ್ಸವದ ಸಮಾರಂಭದಲ್ಲಿ ಪೊಲೀಸ್ ಎಚ್ಚರಿಕೆ ಕಡೆಗಣಿಸಿ 11 ಜನರ ಸಾವಿಗೆ ಕಾಂಗ್ರೆಸ್ ಕಾರಣವಾಯಿತು. ಈ ಕೊಲೆಗೆ ಕನ್ನಡಿಗರಿಂದ ಕ್ಷಮೆಯಾಚಿಸುವಿರಾ?
-
ಬೆಲೆ ಏರಿಕೆಯ ಬರೆ: ಹಾಲು, ಮೊಸರು, ವಿದ್ಯುತ್, ನೋಂದಣಿ ಶುಲ್ಕ ಎಲ್ಲವೂ ದ್ವಿಗುಣಗೊಂಡಿದೆ. ಬಡವರಿಗೆ ಮತ್ತು ಮಧ್ಯಮ ವರ್ಗಕ್ಕೆ ಬರೆ ಎಳೆದಿದ್ದಕ್ಕೆ ಕ್ಷಮೆಯಾಚಿಸುವಿರಾ?