ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ನಡೆದ ಘಟನೆಯಲ್ಲಿ ನೂಕುನುಗ್ಗಲು ಉಂಟಾಗಿ 11 ಜನರು ಅಸ್ವಸ್ಥರಾಗಿದ್ದಾರೆ. ಶಾಸಕ ಅಶೋಕ್ ರೈ ನೇತೃತ್ವದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಸಮಯದಲ್ಲಿ ಈ ದುರಂತ ಸಂಭವಿಸಿದೆ. ಅಸ್ವಸ್ಥರಾದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ.
ಘಟನೆಯ ನಂತರ ಕೂಡಲೇ ಅಸ್ವಸ್ಥರನ್ನು ಪುತ್ತೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಸ್ವಸ್ಥರ ಪಟ್ಟಿಯಲ್ಲಿ ಯೋಗಿತ (20), ಸಭಾ ಮಾಡಾವು (20), ಆಮೀನಾ ಪಾಟ್ರಕೋಡಿ (56), ನೇತ್ರಾವತಿ ಇರ್ದೆ (37), ಲೀಲಾವತಿ ಕಡಬ (50), ವಸಂತಿ ಬಲ್ನಾಡ್ (53), ಕುಸುಮ (62), ರತ್ನವತಿ ಪೆರಿಗೇರಿ (67), ಅಫೀಲಾ ಪಾಟ್ರಕೋಡಿ (20), ಸ್ನೇಹಪ್ರಭಾ (41) ಮತ್ತು ಜಸೀಲಾ (30) ಅವರು ಸೇರಿದ್ದಾರೆ.
ಕಾರ್ಯಕ್ರಮದಲ್ಲಿ ಕ್ರೀಡಾಂಗಣದ ಸಾಮರ್ಥ್ಯಕ್ಕಿಂತ ಹೆಚ್ಚು ಜನರ ಭಾಗವಹಿಸಿದ್ದರು. ಇದರಿಂದಾಗಿ ನೂಕುನುಗ್ಗಲು ಉಂಟಾಗಿ ಅನೇಕರು ಉಸಿರಾಡಲು ಕಷ್ಟವಾಗಿ ಅಸ್ವಸ್ಥರಾಗಿದ್ದಾರೆ. ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಜನರಿಗೆ ತಟ್ಟೆ ಮತ್ತು ವಸ್ತ್ರಗಳನ್ನ ಗಿಫ್ಟ್ ನೀಡುವ ಯೋಜನೆ ಇತ್ತು.
ಅಕ್ಟೋಬರ್ 19ರಂದೇ ಪೊಲೀಸರು ಆಯೋಜಕರಿಗೆ ಪತ್ರ ಬರೆದು ಹೆಚ್ಚಿನ ಆಸನ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಆರಂಭದಲ್ಲಿ ಅಲ್ಪ ಸ್ವಲ್ಪ ಖುರ್ಚಿ ಹಾಕಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಆಯೋಜಕರ ಮೇಲೆ ಗರಂ ಆಗಿದ್ದು, ನಂತರ ಹೆಚ್ಚಿನ ಖುರ್ಚಿಗಳನ್ನು ಹಾಕಲಾಗಿತ್ತು. ಆದರೂ ಸಹ ಈ ದುರ್ಘಟನೆ ತಡೆಗಟ್ಟಲು ಸಾಧ್ಯವಾಗಲಿಲ್ಲ.ಕಾರ್ಯಕ್ರಮದಲ್ಲಿ ಸಣ್ಣ ಮಕ್ಕಳನ್ನು ಸಹ ಕರೆದುಕೊಂಡು ಬಂದಿದ್ದ ಅನೇಕ ಕುಟುಂಬಗಳು ಕುಡಿಯಲು ನೀರು ಸಿಗದೆ ಪರದಾಡಿದ್ದಾರೆ.
ಅಸ್ವಸ್ಥರಾಗಿರುವ ಎಲ್ಲರೂ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿದೆ.





