ಕೃಷ್ಣಮಠದಲ್ಲಿ ಗೀತೆಯ 15ನೇ ಅಧ್ಯಾಯದ ಕಡೆಯ 10 ಶ್ಲೋಕಗಳನ್ನು ಪಠಿಸಿದ ನಮೋ

Untitled design 2025 11 28T130902.321

ಉಡುಪಿ, ನವೆಂಬರ್ 28, 2025: “ಅಯೋಧ್ಯೆಯಲ್ಲಿ ಶ್ರೀರಾಮನನ್ನು ಪುನಃ ಸ್ಥಾಪಿಸಿ, ಇಂದು ಶ್ರೀ ಕೃಷ್ಣನ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅರ್ಜುನನಂತೆ ಆಗಮಿಸಿದ್ದಾರೆ” ಎಂದು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭಾವುಕವಾಗಿ ಹೇಳಿದರು.

“14 ವರ್ಷಗಳ ವನವಾಸದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ. ಅದೇ ರೀತಿ 17 ವರ್ಷಗಳ ಹಿಂದೆ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು. ಆಗ ಇಂದ್ರ ಪರ್ಯಾಯ ನಡೆಯುತ್ತಿತ್ತು. ಇಂದು ಪ್ರಧಾನಿಯಾಗಿ ಮತ್ತೆ ಬಂದಿರುವುದು ಶ್ರೀ ಕೃಷ್ಣನ ಕೃಪೆ” ಎಂದು ಶ್ರೀಗಳು ನೆನಪಿಸಿಕೊಟ್ಟರು.

“ಶ್ರೀ ಕೃಷ್ಣನ ಬಳಿ ನಾನು ಆರೋಗ್ಯ ಮತ್ತು ಶಕ್ತಿಯನ್ನು ಬೇಡುತ್ತೇನೆ. ರಾಮ ಮಂದಿರವನ್ನು ಪ್ರತಿಷ್ಠಾಪಿಸಿ ಇಂದು ಇಲ್ಲಿ ಬಂದು ಅದನ್ನು ಕೃಷ್ಣಾರ್ಪಣೆ ಮಾಡಿದ್ದಾರೆ. ಭಗವದ್ಗೀತೆಯ ಎಲ್ಲ ಅಂಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕೃಷ್ಣ ಹೇಳಿದ ನಿಸ್ವಾರ್ಥ ಸೇವೆ, ಕರ್ಮಯೋಗ – ಇವೆಲ್ಲವನ್ನೂ ಮೋದಿಯವರು ತಮ್ಮ ಕಾರ್ಯವೈಖರಿಯಲ್ಲಿ ಜೀವಂತವಾಗಿರಿಸಿದ್ದಾರೆ ಎಂದು ಶ್ರೀಗಳು ಶ್ಲಾಘಿಸಿದರು.

‘ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ… ತದಾತ್ಮಾನಂ ಸೃಜಾಮ್ಯಹಂ’ ಧರ್ಮ ಸಂಸ್ಥಾಪನೆಗಾಗಿ ನಾನು ಮತ್ತೆ ಮತ್ತೆ ಅವತರಿಸುತ್ತೇನೆ ಎಂದು ಶ್ರೀ ಕೃಷ್ಣ ಹೇಳಿದ. ಆ ಸಂದೇಶವನ್ನು ಮೋದಿಯವರು ಜೀವಂತವಾಗಿ ಪಾಲಿಸುತ್ತಿದ್ದಾರೆ. ಧರ್ಮದಿಂದ ಜಗತ್ತನ್ನು ರಕ್ಷಿಸುವುದು, ದುಷ್ಟರಿಗೆ ಶಿಕ್ಷೆ ನೀಡುವುದು ಗೀತೆಯ ಮೂಲ ಸಂದೇಶ. ಅದನ್ನು ಈ ಯುಗದಲ್ಲಿ ಜಾರಿಗೆ ತಂದವರು ನರೇಂದ್ರ ಮೋದಿ ಎಂದು ಪುತ್ತಿಗೆ ಶ್ರೀಗಳು ಗೌರವ ಸಮರ್ಪಿಸಿದರು.

ವಿಶ್ವಗೀತಾ ಪರ್ಯಾಯಕ್ಕೆ ವಿಶ್ವನಾಯಕನೇ ಬಂದಿದ್ದಾನೆ. ಇದು ಉಡುಪಿ ಶ್ರೀ ಕೃಷ್ಣ ಮಠಕ್ಕೆ, ಮಧ್ವ ಸಿದ್ಧಾಂತಕ್ಕೆ, ಸನಾತನ ಧರ್ಮಕ್ಕೆ ದೊರೆತ ಅಪೂರ್ವ ಗೌರವ ಎಂದು ಶ್ರೀಗಳು ಭಾವುಕರಾದರು.

ಲಕ್ಷ ಕಂಠ ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವತಃ 15ನೇ ಅಧ್ಯಾಯದ ಕೊನೆಯ 10 ಶ್ಲೋಕಗಳನ್ನು (11-20) ಪಠಿಸಿದ್ದು ವಿಶೇಷವಾಗಿತ್ತು. ಅರ್ಜುನನಿಗೆ ಗೀತೋಪದೇಶ ನೀಡಿದ ಕೃಷ್ಣನ ಬಳಿ ಇಂದು ಅರ್ಜುನನಂತೆಯೇ ಮೋದಿಯವರು ಬಂದಿದ್ದಾರೆ ಎಂದು ಪುತ್ತಿಗೆ ಶ್ರೀಗಳು ಹೇಳಿದ್ದಾರೆ. ಸಮಾರಂಭದಲ್ಲಿದ್ದ ಭಕ್ತಾಧಿಗಳೆಲ್ಲಾ “ಜೈ ಶ್ರೀರಾಮ… ಜೈ ಶ್ರೀಕೃಷ್ಣ… ಭಾರತ್ ಮಾತಾ ಕಿ ಜೈ” ಘೋಷಣೆಗಳನ್ನು ಕೂಗುತ್ತಾ ಮೋದಿಗೆ ಜೈಕಾರ ಕೂಗಿದರು.17 ವರ್ಷದ ಉಡುಪಿ ಕೃಷ್ಣನ ದರ್ಶನ ಪಡೆದ ಮೋದಿಗೆ ಇದು ಮರೆಯಲಾಗದ ಕ್ಷನ ಎಂದರೆ ತಪ್ಪಾಗಲಾರದು.

Exit mobile version