ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಹಸಿರು ಕ್ರಾಂತಿಗೆ ಚಾಲನೆ ನೀಡುವ ಮಹತ್ವಾಕಾಂಕ್ಷಿ ಕಾರ್ಯಕ್ರಮ ನಡೆಯುತ್ತಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ‘ಬೆಂಗಳೂರು ನಗರ ಪುನಶ್ಚೇತನ ಮಿಷನ್ 2026-30’ ಯೋಜನೆಯಡಿ ಕೇವಲ 12 ಗಂಟೆಗಳ ಅವಧಿಯಲ್ಲಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಮೂಲಕ ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಲಾಗಿದೆ.
ಬೆಂಗಳೂರು ನಗರದ ಹಸಿರು ವಾತಾವರಣವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಆಯೋಜಿಸಿರುವ ಈ ಅಭಿಯಾನಕ್ಕೆ ಸಾವಿರಾರು ನಾಗರಿಕರು, ವಿದ್ಯಾರ್ಥಿಗಳು, ಸ್ವಯಂಸೇವಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿವೆ. ಸುಮಾರು 50 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಸಸಿ ನೆಡುವ ಕಾರ್ಯದಲ್ಲಿ ಭಾಗವಹಿಸುತ್ತಿದ್ದು, ನಗರದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯುತ್ತಿದೆ.
ಈ ಹಸಿರು ಅಭಿಯಾನದ ಅಂಗವಾಗಿ ಡಾ. ಶಿವರಾಮ ಕಾರಂತ ಬಡಾವಣೆ, ನಾಡಪ್ರಭು ಕೆಂಪೇಗೌಡ ಬಡಾವಣೆ, ಬನಶಂಕರಿ 6ನೇ ಹಂತ, ಕೆರೆಗಳ ದಂಡೆಗಳು, ರಾಜಕಾಲುವೆಗಳ ಇಕ್ಕೆಲಗಳು, ಉದ್ಯಾನಗಳು ಹಾಗೂ ಇತರೆ ಪರಿಸರ ವಲಯಗಳಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಒಟ್ಟು 243 ಎಕರೆ ಪ್ರದೇಶವನ್ನು 49 ವಲಯಗಳಾಗಿ ವಿಂಗಡಿಸಿ ಯೋಜಿತ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪರಿಸರ ಸಂರಕ್ಷಣೆ ಮತ್ತು ನಗರ ಹಸಿರೀಕರಣಕ್ಕೆ ಈ ಕಾರ್ಯಕ್ರಮ ಮಹತ್ವದ ಹೆಜ್ಜೆಯಾಗಿದೆ.
ಇದೇ ಸಂದರ್ಭದಲ್ಲಿ ಬೆಳಗ್ಗೆ 11 ಗಂಟೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹೆಸರಿನಲ್ಲಿ ನಿರ್ಮಿಸಲಾದ ಕೃಷ್ಣಪಥ ರಸ್ತೆ ಲೋಕಾರ್ಪಣೆ ಕಾರ್ಯಕ್ರಮವೂ ನಡೆಯಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರಸ್ತೆ ಉದ್ಘಾಟನೆ ನೆರವೇರಿಸುವ ಜೊತೆಗೆ ನಾಡಪ್ರಭು ಕೆಂಪೇಗೌಡರ ಸ್ಮರಣಾರ್ಥ ಆಯೋಜಿಸಿರುವ ಏಳು ಪುರಜ್ಯೋತಿಗಳ ಸ್ವೀಕಾರ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಕುರಿತು ಮಾತನಾಡಿದ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, “ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಬೃಹತ್ ಹಸಿರು ಅಭಿಯಾನ ಕೈಗೊಳ್ಳಲಾಗಿದೆ. ಕೇವಲ 12 ಗಂಟೆಗಳಲ್ಲಿ 15 ಲಕ್ಷ ಸಸಿಗಳನ್ನು ನೆಟ್ಟು ಗಿನ್ನಿಸ್ ವಿಶ್ವದಾಖಲೆ ನಿರ್ಮಿಸುವ ಗುರಿ ಹೊಂದಿದ್ದೇವೆ. ಸುಮಾರು 50 ಸಾವಿರ ಸ್ವಯಂಸೇವಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ” ಎಂದು ಹೇಳಿದರು.
ಎಸ್.ಎಂ. ಕೃಷ್ಣ ಅವರ ಹೆಸರಿನ ಕೃಷ್ಣಪಥ ರಸ್ತೆಯ ಉದ್ಘಾಟನೆಯೂ ಇದೇ ದಿನ ನಡೆಯುತ್ತಿರುವುದು ವಿಶೇಷ. ಮ್ಯಾರಥಾನ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಪರಿಸರ ಸಂರಕ್ಷಣೆ ಮತ್ತು ಬೆಂಗಳೂರಿನ ಹಸಿರು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಇದು ಐತಿಹಾಸಿಕ ದಿನವಾಗಲಿದ ಎಂದರು.
ಬೆಂಗಳೂರನ್ನು ಮತ್ತಷ್ಟು ಹಸಿರು ಮತ್ತು ಪರಿಸರ ಸ್ನೇಹಿ ನಗರವನ್ನಾಗಿ ರೂಪಿಸುವ ಉದ್ದೇಶದಿಂದ ಕೈಗೊಂಡಿರುವ ಈ ಅಭಿಯಾನ ಕೇವಲ ಸಸಿ ನೆಡುವ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವ ಸಂಕಲ್ಪವಾಗಿದೆ. ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯ ನಗರ ನಿರ್ಮಾಣದ ಕನಸನ್ನು ಮುಂದುವರಿಸುವ ನಿಟ್ಟಿನಲ್ಲಿ ಈ ಹಸಿರು ಅಭಿಯಾನ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
