ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಖಾಸಗಿ ವಿಡಿಯೋ ಮುಂದಿಟ್ಟು ಬ್ಲ್ಯಾಕ್ಮೇಲ್ ಮಾಡಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ರೌಡಿ ಅರಸಯ್ಯನ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಶೂಟ್ ಗಿರಿ ಮತ್ತು ಸ್ವರೂಪ್ ಎಂಬ ಇಬ್ಬರು ಆರೋಪಿಗಳು 2022ರಲ್ಲಿ ಫೇಸ್ಬುಕ್ ಮೂಲಕ ಮಹಿಳೆಯೊಬ್ಬಳೊಂದಿಗೆ ಪರಿಚಯ ಮಾಡಿಕೊಂಡು ಅವಳಿಂದ ಒಟ್ಟು 8.62 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾರೆ.
ಸ್ವರೂಪ್ 2022ರಲ್ಲಿ ಫೇಸ್ಬುಕ್ ಮೂಲಕ ಮಹಿಳೆಗೆ ಪರಿಚಯವಾದ. ಕಾಲಕ್ರಮೇಣ ನಂಬಿಕೆ ಬೆಳೆಸಿದ ಸ್ವರೂಪ್, ತನಗೆ ಆರ್ಥಿಕ ಕಷ್ಟ ಎಂದು ಹೇಳಿ ಮಹಿಳೆಯಿಂದ 4.42 ಲಕ್ಷ ರೂಪಾಯಿ ಸಾಲ ಪಡೆದ. ಮಹಿಳೆ ಹಣ ವಾಪಸ್ ಕೇಳಿದಾಗ, ಸ್ವರೂಪ್ ಮತ್ತು ಶೂಟ್ ಗಿರಿ ಆಕೆಯ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದರು. ಈ ನಿರಂತರ ಬೆದರಿಕೆಗೆ ಬೇಸತ್ತ ಮಹಿಳೆ ತನ್ನ ಚಿನ್ನಾಭರಣಗಳನ್ನು ಮಾರಿ ಮತ್ತೊಮ್ಮೆ 4.2 ಲಕ್ಷ ರೂಪಾಯಿ ಹಣವನ್ನು ಆರೋಪಿಗಳಿಗೆ ನೀಡಬೇಕಾಗಿ ಬಂತು.
ಆರೋಪಿಗಳ ದೌರ್ಜನ್ಯದಿಂದ ಬೇಸತ್ತ ಮಹಿಳೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾದಾಗ, ಶೂಟ್ ಗಿರಿ ಹಣ ಕೊಡುವುದಾಗಿ ಹೇಳಿ ಮಹಿಳೆಯನ್ನು ತಡೆದ. ನಂತರ, ಹಣ ನೀಡದೆ, ಸ್ವರೂಪ್ ನಮ್ಮ ಹುಡುಗ, ಅವನ ತಂಟೆಗೆ ಬಂದರೆ ಸರಿ ಇರಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.