ಬೆಂಗಳೂರು ಆಗಸ್ಟ್ 13: ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹೈ ಸೆಕ್ಯುರಿಟಿ ಸೆಲ್‌ನಿಂದ ಮೊಬೈಲ್ ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹಾಗೂ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಆಗಸ್ಟ್ 11ರಂದು ಸಿಸಿಬಿ ಅಧಿಕಾರಿಗಳು ಜೈಲಿನ ಮೇಲೆ ದಿಢೀರ್ ದಾಳಿ ನಡೆಸಿದ ವೇಳೆ ಹೈ ಸೆಕ್ಯುರಿಟಿ ಬ್ಯಾರಕ್‌ನಲ್ಲಿ ರೆಡ್ಮಿ ಮೊಬೈಲ್, ಚಾರ್ಜರ್, ಸಿಮ್ ಕಾರ್ಡ್, ಪೆನ್‌ಡ್ರೈವ್ ಹಾಗೂ ಡೈರಿ ವಶಪಡಿಸಿಕೊಳ್ಳಲಾಗಿತ್ತು.
ಈ ಕುರಿತು ಸಿಸಿಬಿ ವತಿಯಿಂದ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಾಗಿದ್ದು, ವಶಪಡಿಸಿಕೊಂಡ ಎಲ್ಲ ವಸ್ತುಗಳನ್ನು ಸೀಜ್ ಮಾಡಿ ಸೀಲ್ ಮಾಡಿದ ಕವರ್‌ಗಳಲ್ಲಿ ತನಿಖಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಡಿಸಿಪಿ ಎಂ. ನಾರಾಯಣ್ ತಿಳಿಸಿದ್ದಾರೆ.
ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳು ಪತ್ತೆಯಾಗಿವೆ ಎಂಬ ವರದಿಗಳು ಪ್ರಸಾರವಾಗಿದ್ದವು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ, “ಪೆನ್‌ಡ್ರೈವ್‌ನಲ್ಲಿ ವಿಡಿಯೋಗಳಿವೆ ಎಂಬ ಮಾಹಿತಿ ಸತ್ಯಕ್ಕೆ ದೂರವಾದದ್ದು. ಫೊರೆನ್ಸಿಕ್ ಪರೀಕ್ಷೆ ಪೂರ್ಣಗೊಳ್ಳುವ ಮುನ್ನ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಪ್ರಕರಣದಲ್ಲಿ ಇನ್ನೂ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ರೈ ಅವರ ವಿಚಾರಣೆ ನಡೆಸಿಲ್ಲ. ಮೊಬೈಲ್‌ನ ಪಾಸ್‌ವರ್ಡ್ ಆರೋಪಿಗಳು ನೀಡದಿರುವುದರಿಂದ, ಮೊದಲು ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ನಂತರ ವಿಚಾರಣೆ ನಡೆಸಲಾಗುತ್ತದೆ. ಮೊಬೈಲ್ ಯಾರ ಬಳಕೆಯಲ್ಲಿತ್ತು, ಅದು ಜೈಲಿನೊಳಗೆ ಹೇಗೆ ತಲುಪಿತು ಹಾಗೂ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿ ಪಡೆದಿದ್ದಾರೆ ಎಂಬ ಎಲ್ಲಾ ಅಂಶಗಳ ಪರಿಶೀಲನೆ ನಡೆಯಲಿದೆ.
ಡಿಸಿಪಿ ಪ್ರಕಾರ, ಜೈಲಿನಲ್ಲಿ ಜಾಮರ್ ವ್ಯವಸ್ಥೆ ಇದ್ದರೂ 2G ಮತ್ತು 3G ನೆಟ್‌ವರ್ಕ್ ಕೆಲವು ಭಾಗಗಳಲ್ಲಿ ಲಭ್ಯವಾಗುತ್ತಿರುವುದನ್ನು ಕೈದಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ರೆಡ್ಮಿ ಕಂಪನಿಗೂ ಪತ್ರ ಬರೆಯುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.
ಈ ಹಿಂದೆ ಜೈಲಿನಲ್ಲಿ ಪತ್ತೆಯಾಗಿದ್ದ ಸಿಮ್ ಕಾರ್ಡ್‌ಗಳ ಪರಿಶೀಲನೆಯಲ್ಲಿಯೂ ಅವುಗಳನ್ನು ನಕಲಿ ಗುರುತಿನ ಚೀಟಿ (Fake ID) ಬಳಸಿ ಪಡೆದಿರುವುದು ಬೆಳಕಿಗೆ ಬಂದಿದೆ. ಫೊರೆನ್ಸಿಕ್ ಸೈನ್ಸ್ ಲ್ಯಾಬ್ (FSL) ವರದಿ, ಕಾಲ್ ಡೀಟೇಲ್ ರೆಕಾರ್ಡ್ (CDR) ಹಾಗೂ ಇತರೆ ತಾಂತ್ರಿಕ ಸಾಕ್ಷ್ಯಗಳು ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
