ಮೈಸೂರಲ್ಲಿ ಯುವ ಸಂಭ್ರಮಕ್ಕೆ ಅದ್ಧೂರಿ ಚಾಲನೆ

Your paragraph text (38)

ಮೈಸೂರು: ಮಾನಸ ಗಂಗೋತ್ರಿಯ ಕುವೆಂಪು ಬಯಲು ರಂಗಮಂದಿರದಲ್ಲಿ ಯುವಕರ ಉತ್ಸಾಹ, ಪ್ರತಿಭೆ ಮತ್ತು ಕಲಾ ಪ್ರದರ್ಶನಕ್ಕೆ ವೇದಿಕೆಯಾಗಿರುವ ಯುವ ಸಂಭ್ರಮಕ್ಕೆ ಸೋಮವಾರ ಅದ್ಧೂರಿ ಚಾಲನೆ ದೊರೆಯಿತು. ಹಿನ್ನೆಲೆ ಗಾಯಕ ವಿಜಯ ಪ್ರಕಾಶ್, ನಟಿ ಸಪ್ತಮಿ ಗೌಡ ಹಾಗೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಯತೀಂದ್ರ ಸಿದ್ದರಾಮಯ್ಯ, ಯುವ ಶಕ್ತಿ ದೇಶದ ಬಹುದೊಡ್ಡ ಶಕ್ತಿ. ಯುವಕರು ಉತ್ತಮ ಸಮಾಜ ನಿರ್ಮಾಣದ ಕನಸು ಕಾಣಬೇಕು. ಆ ಕನಸನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಸಾಧನೆಯತ್ತ ಸಾಗಬೇಕು ಎಂದು ಕರೆ ನೀಡಿದರು. ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು, ಭವಿಷ್ಯದಲ್ಲಿ ದೇಶ ಕಟ್ಟುವ ನಾಯಕರಾಗಬೇಕು ಎಂದರು.

ವಿದ್ಯಾರ್ಥಿಗಳು ಹಾಗೂ ಯುವಜನರ ಶಕ್ತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಯುವನಿಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಯುವಕರಿಗೆ ನೆರವು ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಜಿ.ಟಿ. ದೇವೇಗೌಡ ಅವರು ‘ಮೈಸೂರು ದಸರಾ ಎಷ್ಟೊಂದು ಸುಂದರ’ ಹಾಡನ್ನು ಹಾಡಿ ಯುವ ವೀಕ್ಷಕರ ಗಮನ ಸೆಳೆದರು. ಬಳಿಕ ಮಾತನಾಡಿದ ಅವರು, ಯುವ ಸಂಭ್ರಮ ಆರಂಭಿಸಿದ ಸಂದರ್ಭದಲ್ಲಿ ಹಲವು ಟೀಕೆ-ಟಿಪ್ಪಣಿಗಳು ವ್ಯಕ್ತವಾಗಿದ್ದವು. ಅವುಗಳನ್ನು ಬದಿಗಿಟ್ಟು ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಬರಲಾಗುತ್ತಿದೆ ಎಂದರು. ಯುವಕರ ಪ್ರತಿಭೆ ಅನಾವರಣಕ್ಕೆ ಯುವ ಸಂಭ್ರಮ ಉತ್ತಮ ವೇದಿಕೆಯಾಗಿದ್ದು, ಕಾಲೇಜು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಒಟ್ಟು 360 ಕಾಲೇಜುಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಖ್ಯಾತ ಗಾಯಕ ವಿಜಯ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬ ಯುವಕ-ಯುವತಿಯೂ ದೊಡ್ಡ ಕನಸು ಕಾಣಬೇಕು. ಆ ಕನಸನ್ನು ನನಸು ಮಾಡಲು ನಿರಂತರ ಪರಿಶ್ರಮ ಅಗತ್ಯ ಎಂದರು. ಮುಂದಿನ ಕಾರ್ಯಕ್ರಮಗಳಿಗಾಗಿ 50ಕ್ಕೂ ಹೆಚ್ಚು ಗಾಯಕರನ್ನು ಹಾಗೂ 30ಕ್ಕೂ ಹೆಚ್ಚು ನೃತ್ಯ ತಂಡಗಳನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 4ರಿಂದ 7ರವರೆಗೆ ವಿಶೇಷ ಶಿಬಿರ ಆಯೋಜಿಸಲಾಗಿದ್ದು, ಅಕ್ಟೋಬರ್ 7ರಂದು ಇದೇ ವೇದಿಕೆಯಲ್ಲಿ ಬೃಹತ್ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ ಎಂದು ತಿಳಿಸಿದರು.

ನಟಿ ಸಪ್ತಮಿ ಗೌಡ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡು, ಮೈಸೂರು ದಸರಾ ಕ್ರೀಡಾಕೂಟದಲ್ಲಿ ಗೆದ್ದಾಗ ನೀಡುತ್ತಿದ್ದ ನಗದು ಬಹುಮಾನಗಳು ಕ್ರೀಡೆಯಲ್ಲಿ ಪಾಲ್ಗೊಳ್ಳಲು ಪ್ರೇರಣೆ ನೀಡುತ್ತಿದ್ದವು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿತ್ರಸಂತೆ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಡ್ರೋನ್ ಮೂಲಕ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಚಿತ್ರ ಪ್ರದರ್ಶಿಸಿದ್ದು ವಿಶೇಷ ಆಕರ್ಷಣೆಯಾಗಿತ್ತು. ಕಾರ್ಯಕ್ರಮದಲ್ಲಿ ಹಲವು ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

Exit mobile version