ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಸುರಿದ ಭಾರೀ ಮಳೆಯಿಂದ ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಗೆ ನಗರದ ತಗ್ಗು ಪ್ರದೇಶಗಳು ಹಾಗೂ ಕೆಲವು ಕೆಳಸೇತುವೆಗಳಲ್ಲಿ ನೀರು ನಿಂತು ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಯಿತು.
ಮಳೆಯ ಪ್ರಮಾಣ ಹೆಚ್ಚಾದ ಪರಿಣಾಮ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ವಿಶೇಷವಾಗಿ ವೈಟ್‌ಫೀಲ್ಡ್, ಮಾರತ್ತಹಳ್ಳಿ, ಬೆಳ್ಳಂದೂರು, ಬಳಗೆರೆ ಹಾಗೂ ಹೊರ ವರ್ತುಲ ರಸ್ತೆ (ORR) ಸುತ್ತಮುತ್ತ ಮಳೆಯ ತೀವ್ರತೆ ಹೆಚ್ಚಾಗಿತ್ತು. ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.
ವೈಟ್‌ಫೀಲ್ಡ್ ಭಾಗದಲ್ಲಿ ತಡರಾತ್ರಿಯವರೆಗೂ ಸಂಚಾರ ಸಮಸ್ಯೆ ಮುಂದುವರಿದಿತ್ತು. ಭಾರೀ ಮಳೆಯ ನಡುವೆಯೇ ಸಂಚಾರ ಪೊಲೀಸರು ಸ್ಥಳಕ್ಕೆ ತೆರಳಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಹರಸಾಹಸಪಟ್ಟರು. ನೀರು ನಿಂತಿದ್ದ ರಸ್ತೆಗಳಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತಾಗಿದ್ದು, ಕೆಲವೆಡೆ ಸಂಚಾರ ದಟ್ಟಣೆಯೂ ಕಂಡುಬಂದಿತು.
ನಗರದ ಕೇಂದ್ರ ಭಾಗಗಳಾದ ಮೆಜೆಸ್ಟಿಕ್, ಮಲ್ಲೇಶ್ವರಂ, ಕಾರ್ಪೊರೇಷನ್, ಕೆ.ಆರ್. ಮಾರ್ಕೆಟ್, ಲಾಲ್‌ಬಾಗ್ ಹಾಗೂ ಯಶವಂತಪುರ ಸುತ್ತಮುತ್ತಲೂ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಆದರೆ, ಮಳೆ ಸುರಿದ ಸಮಯದಲ್ಲಿ ಈ ಪ್ರದೇಶಗಳಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದ ಕಾರಣ ದೊಡ್ಡ ಪ್ರಮಾಣದ ಟ್ರಾಫಿಕ್ ಜಾಮ್ ಅಥವಾ ಪ್ರಮುಖ ಅನಾಹುತಗಳು ವರದಿಯಾಗಿಲ್ಲ.
ಇದರ ನಡುವೆ ಮಳೆಯ ಪರಿಣಾಮ ಮಲ್ಲೇಶ್ವರಂನ ಸ್ಮಾರ್ಟ್ ಬಜಾರ್ ಮುಂಭಾಗದಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ದ ರಭಸಕ್ಕೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮರ ಬಿದ್ದಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಿಬಿಎ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ರಸ್ತೆಗೆ ಅಡ್ಡವಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡು, ಸಂಚಾರಕ್ಕೆ ಉಂಟಾಗಿದ್ದ ಅಡಚಣೆಯನ್ನು ನಿವಾರಿಸಲು ಕ್ರಮಕೈಗೊಂಡರು.
ನಗರದ ಹಲವು ಭಾಗಗಳಲ್ಲಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತಾಯಿತು. ಕೆಲ ತಗ್ಗು ಪ್ರದೇಶಗಳಲ್ಲಿ ನೀರು ಹೊರಹರಿಯಲು ಸಮಯ ತೆಗೆದುಕೊಂಡ ಪರಿಣಾಮ ರಾತ್ರಿ ವೇಳೆಯೂ ಸಮಸ್ಯೆ ಮುಂದುವರಿದಿತ್ತು. ನಿರಂತರ ಮಳೆಯಿಂದಾಗಿ ನಗರದ ವಿವಿಧೆಡೆ ರಸ್ತೆ, ಸಂಚಾರ ಮತ್ತು ಜಲಾವೃತ ಸಮಸ್ಯೆಗಳು ಎದುರಾಗಿದ್ದು, ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿ ಸ್ಥಳಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿದ್ದಾರೆ.
