ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ

Untitled design 2025 08 02t151741.861

ಬೆಂಗಳೂರು, ಆಗಸ್ಟ್ 2, 2025: ಹಾಸನದ ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತೀರ್ಪು ಪ್ರಕಟಿಸಿದೆ. ಜೀವಾವಧಿ ಶಿಕ್ಷೆ ಜೊತೆ 5 ಲಕ್ಷ ದಂಡ ವಿಧಿಸಲಾಗಿದೆ. ಪ್ರಜ್ವಲ್‌ ರೇವಣ್ಣಗೆ ಇಂದಿನಿಂದಲೇ ಶಿಕ್ಷೆ ಆರಂಭವಾಗಲಿದೆ.

ಶನಿವಾರ ಮಧ್ಯಾಹ್ನ ನ್ಯಾಯಾಲಯವು ಈ ಗಂಭೀರ ತೀರ್ಪನ್ನು ಪ್ರಕಟಿಸಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 376(2)(k) ಮತ್ತು 376(2)(n) ಅಡಿಯಲ್ಲಿ ಜೀವನಪರ್ಯಂತ ಕಾರಾಗೃಹ ಶಿಕ್ಷೆಯನ್ನು ಘೋಷಿಸಲಾಗಿದೆ. ಇದರ ಜೊತೆಗೆ, ಕಲಂ 354 ಮತ್ತು 354(b) ಅಡಿಯಲ್ಲಿ ತಲಾ ಮೂರು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನೂ ವಿಧಿಸಲಾಗಿದೆ. ಸಂತ್ರಸ್ತೆಗೆ 11 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುವಂತೆಯೂ ನ್ಯಾಯಾಲಯವು ಆದೇಶಿಸಿದೆ.

ನ್ಯಾಯಾಲಯದ ಈ ಆದೇಶವನ್ನು ನ್ಯಾಯಮೂರ್ತಿ ಗಜಾನನ ಭಟ್ ಅವರು ಶುಕ್ರವಾರ ದೋಷಿಯೆಂದು ಘೋಷಿಸಿದ ನಂತರ ಶನಿವಾರ ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಐಪಿಸಿ ಕಲಂ 376(2)(k) ಅಡಿಯಲ್ಲಿ ನೌಕರಿ ಮಾಡುತ್ತಿರುವ ಮಹಿಳೆಯ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪಗಳು ಮತ್ತು ಕಲಂ 376(2)(n) ಅಡಿಯಲ್ಲಿ ನಿರಂತರ ಅತ್ಯಾಚಾರದ ಆರೋಪಗಳು ದಾಖಲಾಗಿದ್ದವು.

ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಈ ತೀರ್ಪು ಮೊದಲ ಪ್ರಕರಣಕ್ಕೆ ಸಂಬಂಧಿಸಿದೆ. ಉಳಿದ ಮೂರು ಪ್ರಕರಣಗಳು ಇದೇ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈ ಮೂರು ಪ್ರಕರಣಗಳ ಪೈಕಿ ಒಂದರಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ, ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ಅವರ ವಿರುದ್ಧವೂ ಆರೋಪಗಳು ದಾಖಲಾಗಿವೆ. ಈ ಪ್ರಕರಣಗಳು ಕೂಡ ವಿಚಾರಣೆಯ ಹಂತದಲ್ಲಿದ್ದು, ಇದರ ತೀರ್ಪು ಇನ್ನೂ ಬಾಕಿಯಿದೆ.

Exit mobile version