ಕೊಲಂಬೊ: ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಣ್ಣಿಟ್ಟಿರುವ ಐಸಿಸಿ ಟಿ20 ವಿಶ್ವಕಪ್ 2026ರ ಗ್ರೂಪ್ ಹಂತದ 27ನೇ ಪಂದ್ಯಕ್ಕೆ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಪ್ರಾರಂಭವಾಗಿದೆ. ಟಾಸ್ ಗೆದ್ದಿರುವ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದು, ಸೂರ್ಯಕುಮಾರ್ ಯಾದವ್ ಸಾರಥ್ಯದ ಟೀಂ ಇಂಡಿಯಾ ಬ್ಯಾಟಿಂಗ್ ಆಡಲಿದ್ದಾರೆ.
ಸ್ಪಿನ್ ಅಸ್ತ್ರದೊಂದಿಗೆ ಮೈದಾನಕ್ಕಿಳಿದ ಭಾರತ
ಟಾಸ್ ವೇಳೆ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ಭಾರತದ ಆಡುವ ತಂಡದಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಘೋಷಿಸಿದ್ದಾರೆ. ಕೊಲಂಬೊದ ಪಿಚ್ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇರುವುದರಿಂದ ಭಾರತ ತಂಡವು ‘ಸ್ಪಿನ್ ಅಟ್ಯಾಕ್’ ತಂತ್ರಕ್ಕೆ ಮೊರೆ ಹೋಗಿದೆ.
-
ಸಂಜು ಸ್ಯಾಮ್ಸನ್ ಔಟ್, ಅಭಿಷೇಕ್ ಶರ್ಮಾ ಇನ್: ಕಳೆದ ಪಂದ್ಯದಲ್ಲಿ ಆಡಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸ್ಫೋಟಕ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ತಂಡಕ್ಕೆ ಮರಳಿದ್ದಾರೆ. ಇದು ಭಾರತದ ಪವರ್‌ಪ್ಲೇ ಬ್ಯಾಟಿಂಗ್‌ಗೆ ಹೆಚ್ಚಿನ ಶಕ್ತಿ ನೀಡಲಿದೆ.
-
ಅರ್ಷ್‌ದೀಪ್ ಸಿಂಗ್ ಔಟ್, ಕುಲ್‌ದೀಪ್ ಯಾದವ್ ಇನ್: ಬೌಲಿಂಗ್ ವಿಭಾಗದಲ್ಲಿ ಭಾರತ ದೊಡ್ಡ ಸಾಹಸಕ್ಕೆ ಕೈಹಾಕಿದೆ. ವೇಗಿ ಅರ್ಷ್‌ದೀಪ್ ಸಿಂಗ್ ಬದಲಿಗೆ ಚೀನಾಮನ್ ಸ್ಪಿನ್ನರ್ ಕುಲ್‌ದೀಪ್ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ಬದಲಾವಣೆಯೊಂದಿಗೆ ಭಾರತ ತಂಡದಲ್ಲಿ ಜಸ್‌ಪ್ರೀತ್ ಬುಮ್ರಾ ಏಕೈಕ ಪರಿಣಿತ ವೇಗಿಯಾಗಿದ್ದು, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ಅವರನ್ನೊಳಗೊಂಡ ಬಲಿಷ್ಠ ಸ್ಪಿನ್ನರ್ಸ್ ಪಾಕ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಿದ್ಧರಾಗಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಬದಲಾವಣೆಯಿಲ್ಲ
ಇನ್ನೊಂದೆಡೆ, ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ತಮ್ಮ ವಿಜಯಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕಿಳಿದಿದ್ದಾರೆ. ಬಾಬರ್ ಅಜಮ್ ಮತ್ತು ಶಹೀನ್ ಅಫ್ರಿದಿ ಅವರಂತಹ ಅನುಭವಿಗಳ ಮೇಲೆ ಪಾಕ್ ಹೆಚ್ಚಿನ ಭರವಸೆ ಇಟ್ಟಿದೆ.
ಭಾರತ: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ಶಿವಮ್ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬುಮ್ರಾ.
ಪಾಕಿಸ್ತಾನ: ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಸಲ್ಮಾನ್ ಅಘಾ (ನಾಯಕ), ಬಾಬರ್ ಅಜಮ್, ಮೊಹಮ್ಮದ್ ನವಾಜ್, ಶದಾಬ್ ಖಾನ್, ಫಹೀಮ್ ಅಶ್ರಫ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶಹೀನ್ ಅಫ್ರಿದಿ, ಅಬ್ರಾರ್ ಅಹ್ಮದ್, ಉಸ್ಮಾನ್ ತಾರಿಕ್.
