ಬಿಡದಿ ಪಾದಯಾತ್ರೆಗೆ ಪೊಲೀಸರ ತಡೆ: ಸರ್ಕಾರದ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕಿಡಿ

ಬಲಿಷ್ಠ (59)

ಬೆಂಗಳೂರು: ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ಜೆಡಿಎಸ್‌ ನಡೆಸುತ್ತಿದ್ದ ಪಾದಯಾತ್ರೆಗೆ ಪೊಲೀಸರು ಬ್ಯಾರಿಕೇಡ್‌ ಹಾಕಿ ತಡೆದಿರುವುದಕ್ಕೆ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲೆ ಒತ್ತಡ ಹೇರಿ ಪಾದಯಾತ್ರೆಗೆ ಅಡ್ಡಿಪಡಿಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಣಮಿಣಕಿ ಟೋಲ್‌ ಬಳಿ ಪಾದಯಾತ್ರೆ ತಡೆಯಲಾಗಿದ್ದು, ಈ ವೇಳೆ ನಿಖಿಲ್‌ ಕುಮಾರಸ್ವಾಮಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಬಿಡದಿ ಟೌನ್‌ಶಿಪ್‌ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ನಿಖಿಲ್‌, ಕಳೆದ 515 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಅವರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಆರೋಪಿಸಿದರು. ರೈತರ ಭೂಮಿಯನ್ನು ಕಸಿದುಕೊಳ್ಳಲು ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧವೂ ವಾಗ್ದಾಳಿ ನಡೆಸಿದರು.

“ಇದೇ ಜಿಲ್ಲೆಯ ಜನರ ಬಳಿ ಹಿಂದೆ ಸಿಎಂ ಡಿ.ಕೆ. ಶಿವಕುಮಾರ್‌ ಪೆನ್ನು, ಪೇಪರ್‌ ಕೇಳಿದ್ದರು. ಇದೀಗ ರೈತರ ಭೂಮಿ ಕಿತ್ತುಕೊಳ್ಳಲು ಅದೇ ಪೆನ್ನು, ಪೇಪರ್‌ ಬಳಸುತ್ತಿದ್ದಾರೆಯೇ?” ಎಂದು ಪ್ರಶ್ನಿಸಿದ ನಿಖಿಲ್‌, ಈ ಎಲ್ಲ ಬೆಳವಣಿಗೆಗಳಿಗೆ ಸ್ಥಳೀಯ ಶಾಸಕ ಹೆಚ್.ಸಿ. ಬಾಲಕೃಷ್ಣ ಕಾರಣ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿ ಆಗಿರುವುದಕ್ಕೆ ತಮಗೆ ಯಾವುದೇ ಹೊಟ್ಟೆಕಿಚ್ಚಿಲ್ಲ. ಅವರು ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದ್ದೇವೆ. ಆದರೆ ರೈತರ ಸಮಸ್ಯೆಗಳನ್ನು ಆಲಿಸಲು ಸರ್ಕಾರ ಕನಿಷ್ಠ ಒಂದು ದಿನವೂ ಸ್ಥಳಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಚಿವ ಬಾಲಕೃಷ್ಣ ಅವರು ರೈತರ ವಿಚಾರದಲ್ಲಿ ಕೇವಲ ಸಂತೆ ಭಾಷಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಭೂಸ್ವಾಧೀನಕ್ಕೆ ಸಂಬಂಧಿಸಿದ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರ ಟೌನ್‌ಶಿಪ್‌ ಯೋಜನೆ ಕೈಗೊಳ್ಳುತ್ತಿದೆ ಎಂದು ಆರೋಪಿಸಿದ ನಿಖಿಲ್‌, ರೈತರ ಒಪ್ಪಿಗೆ ಪಡೆಯದೇ ಜೆಎಂಸಿ ಮಾಡಲು ಮುಂದಾಗಿರುವುದನ್ನೂ ಪ್ರಶ್ನಿಸಿದರು. ಇದನ್ನು ವಿರೋಧಿಸಿದ ಮಹಿಳೆಯರ ಮೇಲೆಯೇ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿ, ಈ ವಿಚಾರದಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮುಖ್ಯಮಂತ್ರಿ ರೈತರಿಗೆ ನೀಡುತ್ತಿರುವ ಪರಿಹಾರದ ಮೊತ್ತದ ಪ್ರಸ್ತಾಪಕ್ಕೂ ನಿಖಿಲ್‌ ಆಕ್ಷೇಪ ವ್ಯಕ್ತಪಡಿಸಿದರು. “ಎರಡು ಕೋಟಿ ರೂಪಾಯಿ ಆಯಿತು, ಈಗ ಮೂರು ಕೋಟಿ ಕೊಡುತ್ತೇವೆ ಎನ್ನುತ್ತಿದ್ದಾರೆ. ನಿಮ್ಮ ಹಣಕ್ಕೆ ರೈತರು ಬಲಿಯಾಗುವುದಿಲ್ಲ. ಒಂದಿಂಚು ಭೂಮಿಯನ್ನೂ ನಿಮಗೆ ಕೊಡುವುದಿಲ್ಲ. ಸ್ವಾಭಿಮಾನಿ ರೈತರನ್ನು ಹಣದಲ್ಲಿ ಅಳೆಯಬೇಡಿ” ಎಂದು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದರು.

ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರವಾಗಿ ನಿಲ್ಲಲಿದೆ. ಕಾನೂನು ಹೋರಾಟದ ಜೊತೆಗೆ ಬೀದಿಗಿಳಿದು ಹೋರಾಟ ನಡೆಸಲು ಜೆಡಿಎಸ್‌ ಸಿದ್ಧವಿದೆ ಎಂದು ನಿಖಿಲ್‌ ಹೇಳಿದರು. ರಾಜ್ಯದ ವಿವಿಧ ಭಾಗಗಳಿಂದ ರೈತರ ಪರವಾಗಿ ಜನರು ಆಗಮಿಸಿದ್ದಾರೆ ಎಂದರು. ಕಾಂಗ್ರೆಸ್‌ ಸರ್ಕಾರವೇ ರಚಿಸಿದ್ದ ಸತ್ಯಶೋಧನಾ ಸಮಿತಿಯ ವರದಿಯನ್ನು ಹೆಚ್.ಡಿ. ಕುಮಾರಸ್ವಾಮಿ ವಿಶ್ಲೇಷಿಸಿದ್ದಾರೆ. ಸರ್ಕಾರ ಹಿಂದೆ ನೀಡಿದ್ದ ವರದಿಯಲ್ಲಿನ ಅಂಶಗಳನ್ನು ಒಮ್ಮೆ ಅವಲೋಕಿಸಲಿ ಎಂದರು.

ಪಾದಯಾತ್ರೆ ವೇಳೆ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ ನಿಖಿಲ್‌, ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದರು. ಆಗಸ್ಟ್‌ 18ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೆಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದರು. ಬಿಡದಿ ಟೌನ್‌ಶಿಪ್‌ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

Exit mobile version