ನಾಳೆ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ಎಲ್ಲೆಡೆ ಬಿಗಿ ಬಂದೋಬಸ್ತ್

Untitled design 2025 11 27T085620.174

ಉಡುಪಿ: ನಾಳೆ ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಆಗಮಿಸುತ್ತಿದ್ದು, ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆದಿ ಉಡುಪಿ ಮೈದಾನದಲ್ಲಿ ನಡೆಯಲಿರುವ ‘ಲಕ್ಷ ಕಂಠ ಗೀತಾ ಪಠಣ’ ಮಹಾಕಾರ್ಯಕ್ರಮದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಉಡುಪಿಯ ಶ್ರೀಕೃಷ್ಣ ಮಠದಲ್ಲೂ ದರ್ಶನ ಪಡೆಯಲಿದ್ದಾರೆ.

ಪ್ರಧಾನಿಗಳ ಆಗಮನಕ್ಕೆ ಸಂಬಂಧಿಸಿದಂತೆ ಆದಿ ಉಡುಪಿ ಮೈದಾನದಲ್ಲಿ ವಿಶೇಷವಾಗಿ ಮೂರು ಹೆಚ್ಚುವರಿ ಹೆಲಿಪ್ಯಾಡ್‌ಗಳನ್ನು ಸಿದ್ಧಪಡಿಸಲಾಗಿದೆ. ಬುಧವಾರ ದೆಹಲಿಯಿಂದ ಆಗಮಿಸಿದ ವಾಯುಸೇನೆಯ ಹಿರಿಯ ಅಧಿಕಾರಿಗಳ ತಂಡವು ಈ ಹೆಲಿಪ್ಯಾಡ್‌ಗಳ ಗುಣಮಟ್ಟ ಪರಿಶೀಲಿಸಿತು. ನಂತರ ವಾಯುಸೇನೆಯ ಮೂರು ಹೆಲಿಕಾಪ್ಟರ್‌ಗಳು ಉಡುಪಿ ಆಕಾಶದಲ್ಲಿ ಹಲವು ಬಾರಿ ಸುತ್ತು ಹೊಡೆದು, ಇಳಿಯುವಿಕೆ-ಟೇಕ್‌ಆಫ್ ರಿಹರ್ಸಲ್ ನಡೆಸಿದವು. ಯಾವುದೇ ತಾಂತ್ರಿಕ ತೊಂದರೆ ಇಲ್ಲದಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಪ್ರಧಾನಿ ಸವಾರಿ ಮಾಡಲಿರುವ ಆದಿ ಉಡುಪಿ ಮೈದಾನದಿಂದ ಶ್ರೀಕೃಷ್ಣ ಮಠದವರೆಗಿನ ಮಾರ್ಗದಲ್ಲಿ ವಾಹನ ಸಂಚಾರ ರಿಹರ್ಸಲ್ ನಡೆಯಲಿದೆ. ಈ ಮಾರ್ಗದಲ್ಲಿ ಎರಡು ಬಾರಿ ವಾಹನಗಳ ಚಲನೆಯನ್ನು ಪರೀಕ್ಷಿಸಲಾಗುವುದು. ಪ್ರಧಾನಿಗಳ ಸುರಕ್ಷತೆಗಾಗಿ ವಾಯುಸೇನೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಜೊತೆಗೆ ಕರ್ನಾಟಕ ರಾಜ್ಯ ಪೊಲೀಸ್‌ ಪಡೆಯನ್ನು ನಿಯೋಜಿಸಲಾಗಿದೆ. ಹೊರ ಜಿಲ್ಲೆಗಳಿಂದ ಸಾವಿರಾರು ಪೊಲೀಸರನ್ನು ಕರೆಸಲಾಗಿದೆ.

ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಥಬೀದಿ, ಶ್ರೀಕೃಷ್ಣ ಮಠ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಭಕ್ತರ ಪ್ರವೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಅವಧಿಯಲ್ಲಿ ಯಾವುದೇ ಭಕ್ತರು ಒಳಗೆ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ ಲಕ್ಷಕಂಠ ಕಾರ್ಯಕ್ರಮಕ್ಕೆ ಆಯ್ದ ಪಾಸ್ ಹೊಂದಿರುವವರಿಗೆ ಮಾತ್ರ ಅವಕಾಶವಿದೆ.

ಪ್ರಧಾನಿಗಳ ವೇಳಾಪಟ್ಟಿ

ರಾಜ್ಯ ಬಿಜೆಪಿ ಘಟಕವು ಪ್ರಧಾನಿಯ ಭೇಟಿಯ ಸಮಯದಲ್ಲಿ ರೋಡ್ ಶೋ ನಡೆಸುವ ಯೋಜನೆ ರೂಪಿಸಿದ್ದರೂ, ದೆಹಲಿಯ ಪಿಎಂ ಕಚೇರಿಯು ಯಾವುದೇ ರೀತಿಯ ರೋಡ್ ಶೋಗೆ ಅನುಮತಿ ನೀಡಿಲ್ಲ. ಆದ್ದರಿಂದ, ಪ್ರಧಾನಿ ಮೋದಿ ನೇರವಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳಿ, ಶ್ರೀ ಕೃಷ್ಣನ ದರ್ಶನ ಪಡೆದು, ಲಕ್ಷ ಕಂಠ ಗೀತ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗಲಿದ್ದಾರೆ.

Exit mobile version