ಬೆಂಗಳೂರು: ಸೈಬರ್ ವಂಚಕರು ಪರಿವಾಹನ್ ಹೆಸರಿನಲ್ಲಿ ಎಪಿಕೆ ಫೈಲ್ ಕಳಿಸಿ, ಒಟಿಪಿ ಕೇಳಿ, ನಂತರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ದೋಚಿದ ಘಟನೆ ಮಲ್ಲಸಂದ್ರದ ಕಲ್ಯಾಣನಗರದಲ್ಲಿ ಬೆಳಕಿಗೆ ಬಂದಿದೆ.
ಶ್ರೀಕೃಷ್ಣ ಡ್ರೈವಿಂಗ್ ಸ್ಕೂಲ್‌ನ ಮಾಲೀಕ ರಾಘವೇಂದ್ರ ಎಂಬವರು ವಂಚಿತರಾಗಿದ್ದು, ಇತ್ತೀಚೆಗೆ ತಮ್ಮ ವಾಹನಗಳ ಚಾಲನೆ ಸಂಬಂಧಿತ ದಂಡವನ್ನು ಪರಿಶೀಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅವರ ಮೊಬೈಲ್‌ಗೆ ‘ಪರಿವಾಹನ್’ ಹೆಸರಿನಲ್ಲಿ ಸಂದೇಶ ಬಂದು, ಅಪರಿಚಿತ ಎಪಿಕೆ ಫೈಲ್‌ನ್ನು ಡೌನ್‌ಲೋಡ್ ಮಾಡಲು ಸೂಚನೆ ನೀಡಲಾಯಿತು. ಅವರು ಫೈಲ್ ಓಪನ್ ಮಾಡಿ ಒಟಿಪಿ ನಮೂದಿಸಿದ ತಕ್ಷಣವೇ, ಬ್ಯಾಂಕ್ ಖಾತೆಯಿಂದ ಎರಡು ಲಕ್ಷ ರೂಪಾಯಿ ಹಣವನ್ನು ಶ್ಯಾಪಿಂಗ್ ಖರೀದಿಗೆ ಬಳಸಲಾಗಿದೆ.
ಸೈಬರ್ ಅಪರಾಧಿಗಳು ರಾಘವೇಂದ್ರ ಅವರ ಹೆಸರಿನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸಿ ವಂಚನೆ ಮಾಡಿದ್ದಾರೆ.
ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ವಿಭಾಗ ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಈ ರೀತಿಯ ಎಪಿಕೆ ಫೈಲ್ ಗೆ ಸ್ಪಂದಿಸುವ ಮೊದಲು ಖಚಿತತೆ ದೃಢಪಡಿಸಿಕೊಳ್ಳಬೇಕೆಂದು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹನುಮಂತರಾಜು ತಿಳಿಸಿದ್ದಾರೆ.
ಮೂರ್ತಿ ಬೀರಯ್ಯನಪಾಳ್ಯ ಗ್ಯಾರಂಟಿ ನ್ಯೂಸ್ ನೆಲಮಂಗಲ