ಪರಪ್ಪನ ಅಗ್ರಹಾರದಲ್ಲಿ ಮೊಬೈಲ್‌ ಬಂದದ್ದು ಹೇಗೆ..? ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಹೇಗೆ..?

ಬೆಂಗಳೂರು: ರಾಜ್ಯದ ಅತಿ ದೊಡ್ಡ ಕಾರಾಗೃಹ ಪರಪ್ಪನ ಅಗ್ರಹಾರ ಮತ್ತೆ ಸುದ್ದಿಯಲ್ಲಿದೆ. ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ಫ್ಲಿಕ್ಸ್‌ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ.

ಜೈಲಿನ ಒಳಗಿರುವ ಕಿಡಿಗೇಡಿಗಳೇ ಚಿತ್ರೀಕರಿಸಿದ್ದಾರೆನ್ನಲಾದ ಈ ವಿಡಿಯೋದಲ್ಲಿ, ಕೈದಿಗಳು ಮೊಬೈಲ್ ಫೋನ್ ಬಳಸುತ್ತಾ, ಟಿವಿಯಲ್ಲಿ ನೆಟ್‌ಫ್ಲಿಕ್ಸ್ ವೀಕ್ಷಿಸುತ್ತಿರುವ ದೃಶ್ಯಗಳಿವೆ. ಅಷ್ಟೇ ಅಲ್ಲದೆ, ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ ಎಂದು ಆರ್‌ಸಿಬಿ ತಂಡಕ್ಕೆ ಜೈಲಿನ ಒಳಗಿಂದಲೇ ಬೆಂಬಲ ಸೂಚಿಸುತ್ತಾ ವಿಡಿಯೋ ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಈ ಎಲ್ಲ ಐಷಾರಾಮಿ ಸೌಲಭ್ಯಗಳನ್ನು DGP ಅಲೋಕ್ ಕುಮಾರ್ ಅವರೇ ಒದಗಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲೋಕ್ ಕುಮಾರ್ ಗುರಿಯಾಗಿಸಿದ್ದು ಏಕೆ ?

ಅಲೋಕ್ ಕುಮಾರ್ ಅವರು ಜೈಲು ಡಿಜಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಪರಪ್ಪನ ಅಗ್ರಹಾರದಲ್ಲಿ ದಶಕಗಳಿಂದ ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಿದ್ದರು. ಮೊಬೈಲ್ ಫೋನ್ ಬಳಕೆ, ಹೊರಗಿನಿಂದ ಬರುವ ಅಕ್ರಮ ವಸ್ತುಗಳು ಹಾಗೂ ವಿಶೇಷ ಸೌಲಭ್ಯಗಳ ಮೇಲೆ ತೀವ್ರ ನಿಗಾ ಇರಿಸಿದ್ದರು. ಈ ಖಡಕ್ ಕ್ರಮಗಳಿಂದ ಕಂಗೆಟ್ಟಿರುವ ಜೈಲಿನೊಳಗಿನ ಕಿಡಿಗೇಡಿಗಳು ಮತ್ತು ಅಕ್ರಮದ ಪಾಲುದಾರರು, ವ್ಯವಸ್ಥಿತವಾಗಿ ಅವರ ಹೆಸರಿಗೆ ಕಳಂಕ ತರಲು ಈ ಷಡ್ಯಂತ್ರ ರೂಪಿಸಿರುವ ಸಾಧ್ಯತೆ ದಟ್ಟವಾಗಿದೆ.

ಅಧಿಕಾರಿಗಳ ತನಿಖೆ ಆರಂಭ:

ಖಡಕ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಅಲೋಕ್ ಕುಮಾರ್ ಅವರ ವರ್ಚಸ್ಸನ್ನು ಕುಗ್ಗಿಸಲು ವಿಡಿಯೋವನ್ನು ಎಡಿಟ್ ಮಾಡಲಾಗಿದೆಯೇ ಅಥವಾ ಇದು ಹಳೆಯ ವಿಡಿಯೋವೇ ಎಂಬ ಬಗ್ಗೆ ಜೈಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಜೈಲಿನ ನಿಯಮಗಳನ್ನು ಮೀರಿ ವಿಡಿಯೋ ಚಿತ್ರೀಕರಿಸಿದವರು ಯಾರು ಮತ್ತು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕಿಡಿಗೇಡಿಗಳ ಪತ್ತೆಗೆ ಸೈಬರ್ ಕ್ರೈಂ ಪೊಲೀಸರ ನೆರವು ಪಡೆಯಲಾಗುತ್ತಿದೆ. ಜೈಲಿನ ಒಳಗಿನ ಭದ್ರತಾ ವೈಫಲ್ಯದ ಬಗ್ಗೆಯೂ ಗಂಭೀರ ಚರ್ಚೆಗಳು ಶುರುವಾಗಿವೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಜೈಲಿನ ಅಕ್ರಮಗಳನ್ನು ಮುಂದುವರಿಸಲು ನಡೆಸುತ್ತಿರುವ ಈ ಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Exit mobile version