ಬೆಂಗಳೂರು, ಆ.13: ಸಾರ್ವಜನಿಕ ಆರೋಗ್ಯ ಮತ್ತು ಆಹಾರ ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ಬ್ಯಾಟರಾಯನಪುರ ಹಾಗೂ ಯಲಹಂಕ ವಲಯಗಳಲ್ಲಿ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿದೆ. ಪರಿಶೀಲನೆ ವೇಳೆ ನಿಯಮ ಉಲ್ಲಂಘನೆ, ಅಶುಚಿತ್ವ, ತ್ಯಾಜ್ಯ ವಿಂಗಡಣೆಯಲ್ಲಿ ಲೋಪ ಹಾಗೂ ಅವಧಿ ಮೀರಿದ ಅಡುಗೆ ಎಣ್ಣೆ ಪತ್ತೆಯಾದ ಹಿನ್ನೆಲೆಯಲ್ಲಿ 6 ಹೋಟೆಲ್‌ಗಳಿಗೆ ಒಟ್ಟು 1.60 ಲಕ್ಷ ರೂ. ದಂಡ ವಿಧಿಸಲಾಗಿದೆ.
ಹ್ಯಾಟ್ ಸೆಂಟ್ರಿಕ್ ಹೋಟೆಲ್ (Hyatt Centric) ನಲ್ಲಿ ತ್ಯಾಜ್ಯವನ್ನು ಸಮರ್ಪಕವಾಗಿ ವಿಂಗಡಿಸದಿರುವುದು ಹಾಗೂ ಅಡುಗೆ ಪ್ರದೇಶದಲ್ಲಿ ನೊಣಗಳು ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಿ 40,000 ರೂ. ದಂಡ ವಿಧಿಸಲಾಗಿದೆ.
ಪೀಪೈ ಬ್ರೆವರಿ ಮತ್ತು ಕಿಚನ್ ಹೋಟೆಲ್ ( Peepai Brewery & Kitchen) ನಲ್ಲಿ ಅತ್ಯಂತ ಗಂಭೀರ ಉಲ್ಲಂಘನೆಗಳು ಪತ್ತೆಯಾಗಿವೆ. ಸ್ಟೋರ್ ರೂಮ್‌ನಲ್ಲಿ ಅವಧಿ ಮೀರಿದ ಅಡುಗೆ ಎಣ್ಣೆ, ಕೋಲ್ಡ್ ಸ್ಟೋರೇಜ್‌ನಲ್ಲಿ ಲೇಬಲ್ ಇಲ್ಲದೆ ಸಂಗ್ರಹಿಸಿದ್ದ ಮಾಂಸ ಹಾಗೂ ಖರೀದಿ ದಿನಾಂಕಕ್ಕೆ ಸಂಬಂಧಿಸಿದ ಇನ್‌ವಾಯ್ಸ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಕಾರಣಕ್ಕೆ 80,000 ರೂ. ದಂಡ ವಿಧಿಸಲಾಗಿದೆ.
ಥಲಸ್ಸೆರಿ ರೆಸ್ಟೋರೆಂಟ್ (Thalassery Restaurant) ನಲ್ಲಿ ತ್ಯಾಜ್ಯ ವಿಂಗಡಣೆ ಸರಿಯಾಗಿ ಮಾಡದಿರುವುದು, ಅಡುಗೆ ಮನೆಯಲ್ಲಿ ನೊಣಗಳು, ಅಶುಚಿತ್ವ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ಪತ್ತೆಯಾದ ಕಾರಣ ರೂ. 20,000 ದಂಡ ಮತ್ತು ನೋಟಿಸ್ ನೀಡಲಾಗಿದೆ.
ಚಿಕ್ಕಪೇಟೆ ದೊನ್ನೆ ಬಿರಿಯಾನಿ (Chickpete Donne Biriyani) ಹೋಟೆಲ್‌ನಲ್ಲೂ ಇದೇ ರೀತಿಯ ಉಲ್ಲಂಘನೆಗಳು ಕಂಡುಬಂದಿದ್ದು, ತ್ಯಾಜ್ಯ ವಿಂಗಡಣೆಯಲ್ಲಿ ಲೋಪ, ಅಡುಗೆ ಮನೆಯ ಅಶುಚಿತ್ವ ಹಾಗೂ ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆಗೆ ₹5,000 ದಂಡ ವಿಧಿಸಲಾಗಿದೆ.
ನಂದನ ಪ್ಯಾಲೇಸ್ (Nandhana Palace) ನಲ್ಲಿ ತ್ಯಾಜ್ಯ ನಿರ್ವಹಣೆ, ಅಡುಗೆ ಮನೆಯ ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಬಳಕೆಯಲ್ಲಿ ನಿಯಮ ಉಲ್ಲಂಘನೆ ಪತ್ತೆಯಾಗಿ ರೂ. 15,000 ದಂಡ ವಿಧಿಸಲಾಗಿದೆ.
ಸ್ವಾತಿ ಹೋಟೆಲ್ (Swathi Hotel) ನಲ್ಲಿ ಅನೈರ್ಮಲ್ಯಕರ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಲಾಗಿದೆ.
ನಗರ ಪಾಲಿಕೆ ಅಧಿಕಾರಿಗಳು ಆಹಾರ ಗುಣಮಟ್ಟ ಮತ್ತು ಸಾರ್ವಜನಿಕ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲೂ ಇಂತಹ ದಿಢೀರ್ ಪರಿಶೀಲನೆಗಳು ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ಪ್ರಮುಖ ಉಲ್ಲಂಘನೆಗಳು
|
ಹೋಟೆಲ್ |
ಕ್ರಮ |
|---|---|
|
ಹ್ಯಾಟ್ ಸೆಂಟ್ರಿಕ್ ಹೋಟೆಲ್ |
40,000 ರೂ. ದಂಡ |
|
ಪೀಪೈ ಬ್ರೆವರಿ ಮತ್ತು ಕಿಚನ್ ಹೋಟೆಲ್ |
80,000 ರೂ. ದಂಡ |
|
ಥಲಸ್ಸೆರಿ ರೆಸ್ಟೋರೆಂಟ್ |
20,000 ರೂ. ದಂಡ |
|
ಚಿಕ್ಕಪೇಟೆ ದೊನ್ನೆ ಬಿರಿಯಾನಿ |
5,000 ರೂ. ದಂಡ |
|
ನಂದನ ಪ್ಯಾಲೇಸ್ |
15,000 ರೂ. ದಂಡ |
|
ಸ್ವಾತಿ ಹೋಟೆಲ್ |
ನೋಟಿಸ್ |
