ಬೆಂಗಳೂರು ವಾಹನ ಸವಾರರಿಗೆ ಬಿಗ್ ಶಾಕ್: ಹೊಸ ಪಾರ್ಕಿಂಗ್ ಶುಲ್ಕ ಜಾರಿ!

Untitled design

ಬೆಂಗಳೂರು ಆಗಸ್ಟ್ 13:  ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ಅಸ್ತವ್ಯಸ್ತ ಪಾರ್ಕಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿಯನ್ನು ರೂಪಿಸಿದೆ. ಈ ನೀತಿಯ ಪ್ರಕಾರ ನಗರದ ರಸ್ತೆಗಳನ್ನು A, B ಮತ್ತು C ಎಂಬ ಮೂರು ವರ್ಗಗಳಾಗಿ ವಿಭಜಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ.

ಆನ್‌ಸ್ಟ್ರೀಟ್ ಪಾರ್ಕಿಂಗ್‌ನಲ್ಲಿ ರಸ್ತೆ ಬದಿಯಲ್ಲೇ ವಾಹನ ನಿಲ್ಲಿಸುವವರಿಗೆ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. C ವರ್ಗದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ 20 ರೂ. ಹಾಗೂ ಕಾರುಗಳಿಗೆ 40 ರೂ., B ವರ್ಗದಲ್ಲಿ ಕ್ರಮವಾಗಿ 30 ರೂ. ಮತ್ತು 60 ರೂ., A ವರ್ಗದಲ್ಲಿ 40 ರೂ. ಮತ್ತು 80 ರೂ. ಪಾವತಿಸಬೇಕಾಗುತ್ತದೆ.

ಆಫ್‌ಸ್ಟ್ರೀಟ್ ಪಾರ್ಕಿಂಗ್‌ಗೆ ತುಸು ಕಡಿಮೆ ದರ ನಿಗದಿಯಾಗಿದೆ. C ವರ್ಗದಲ್ಲಿ ದ್ವಿಚಕ್ರ ವಾಹನಗಳಿಗೆ 10 ರೂ. ಮತ್ತು ಕಾರುಗಳಿಗೆ 20 ರೂ., B ವರ್ಗದಲ್ಲಿ 15 ರೂ. ಮತ್ತು 30 ರೂ., A ವರ್ಗದಲ್ಲಿ 20 ರೂ.. ಮತ್ತು 40 ರೂ.. ಗಂಟೆಗೆ ಪಾವತಿಸಬೇಕು. ಸಾರ್ವಜನಿಕ ಪಾರ್ಕಿಂಗ್ ಸ್ಥಳಗಳ ಬಳಕೆಯನ್ನು ಉತ್ತೇಜಿಸಲು ಮಾಸಿಕ ಪಾಸ್ ವ್ಯವಸ್ಥೆಯನ್ನೂ ಪರಿಚಯಿಸಲಾಗುತ್ತಿದೆ. C ವರ್ಗದಲ್ಲಿ ಬೈಕ್‌ಗೆ 1,000 ರೂ.. ಹಾಗೂ ಕಾರಿಗೆ 2,000 ರೂ., B ವರ್ಗದಲ್ಲಿ 1,500 ರೂ. ಮತ್ತು 3,000 ರೂ., A ವರ್ಗದಲ್ಲಿ ಬೈಕ್‌ಗೆ 2,000 ರೂ  ಹಾಗೂ ಕಾರಿಗೆ 4,000 ರೂ ಮಾಸಿಕ ಶುಲ್ಕ ನಿಗದಿಯಾಗಿದೆ.

ಹೊಸ ನೀತಿಯ ಪ್ರಮುಖ ಅಂಶವೆಂದರೆ ಕೆಲವು ಪ್ರದೇಶಗಳಲ್ಲಿ ಸಂಪೂರ್ಣ ಪಾರ್ಕಿಂಗ್ ನಿಷೇಧ. ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ಆರ್ಟಿರಿಯಲ್ ರಸ್ತೆಗಳು, ಸಿಗ್ನಲ್‌ನ 50 ಮೀಟರ್ ವ್ಯಾಪ್ತಿ ಹಾಗೂ ಉಪ ಮುಖ್ಯ ರಸ್ತೆಗಳ 25 ಮೀಟರ್ ವ್ಯಾಪ್ತಿಯಲ್ಲಿ ವಾಹನ ನಿಲ್ಲಿಸಲು ಅವಕಾಶ ಇರುವುದಿಲ್ಲ. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಜೊತೆಗೆ ವಾಹನವನ್ನು ಟೋಯಿಂಗ್ ಮಾಡುವ ಕ್ರಮಕ್ಕೂ ಅವಕಾಶ ಇರಲಿದೆ.

ವಸತಿ ಪ್ರದೇಶಗಳಲ್ಲಿಯೂ ಹೊಸ ನಿಯಮ ಜಾರಿಯಾಗಲಿದೆ. ಮನೆ ಮಾಲೀಕರು ಬಾಡಿಗೆದಾರರಿಗೆ ವಾಹನ ನಿಲುಗಡೆ ಜಾಗ ಒದಗಿಸಬೇಕು. ಜಾಗ ನೀಡದೇ ರಸ್ತೆ ಮೇಲೆ ಪಾರ್ಕಿಂಗ್ ಮಾಡಲು ಅವಕಾಶ ಮಾಡಿಕೊಟ್ಟರೆ ಮನೆ ಮಾಲೀಕರಿಗೂ ದಂಡ ವಿಧಿಸುವ ಪ್ರಸ್ತಾವವಿದೆ. ಮನೆ ಮುಂದೆ ದೀರ್ಘಾವಧಿ ವಾಹನ ನಿಲುಗಡೆ ಮಾಡಿದರೆ ಶುಲ್ಕ ಪಾವತಿಸುವ ವ್ಯವಸ್ಥೆಯೂ ಜಾರಿಯಾಗಬಹುದು.

ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ನಿರ್ದಿಷ್ಟ ಪ್ರದೇಶಗಳಲ್ಲಿ ರಾತ್ರಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ. ಜೊತೆಗೆ ಸರ್ಕಾರಿ ನಿಗಮಗಳ ಖಾಲಿ ಜಾಗಗಳನ್ನು ಪಾರ್ಕಿಂಗ್ ವಲಯಗಳಾಗಿ ಅಭಿವೃದ್ಧಿಪಡಿಸಿ, ಅನುಮತಿ ಪಡೆದು ಸಾರ್ವಜನಿಕ ಪಾರ್ಕಿಂಗ್ ವ್ಯವಸ್ಥೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

Exit mobile version