ಪರಪ್ಪನ ಅಗ್ರಹಾರ ಜೈಲಲ್ಲಿ ದಿಢೀರ್ ದಾಳಿ: ನಿಷೇಧಿತ ವಸ್ತುಗಳು ಪತ್ತೆ

Untitled design 2026 01 28T104119.923

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದಿಢೀರ್ ದಾಳಿ ನಡೆಸಲಾಗಿದ್ದು, ಕೈದಿಗಳ ಬ್ಯಾರಕ್‌ನಿಂದ ಭಾರಿ ಪ್ರಮಾಣದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ. ಜೈಲಿನ ಟವರ್–1ರ 6ನೇ ಬ್ಯಾರಕ್‌ನ 4ನೇ ಕೊಠಡಿಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 8 ಮೊಬೈಲ್ ಫೋನ್‌ಗಳು, 1 ಸಿಮ್ ಕಾರ್ಡ್, 2 ಚಾರ್ಜರ್ ಹಾಗೂ 3 ಇಯರ್‌ಫೋನ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಾರಾಗೃಹ ಡಿಜಿಪಿಯಾಗಿ ಅಲೋಕ್ ಕುಮಾರ್ ಅವರು ನೇಮಕಗೊಂಡ ಬಳಿಕ ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ, ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಜೈಲು ಅಧಿಕಾರಿಗಳು ಬ್ಯಾರಕ್‌ಗಳ ಮೇಲೆ ದಾಳಿ ನಡೆಸುತ್ತಿದ್ದು, ಇದುವರೆಗೆ 200ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಪರಪ್ಪನ ಅಗ್ರಹಾರ ಜೈಲು ಭದ್ರತೆ ಕುರಿತಂತೆ ಗಂಭೀರ ಸೂಚನೆ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್ ಅವರು, ಅಕ್ರಮ ಚಟುವಟಿಕೆಗಳಿಗೆ ತಕ್ಷಣವೇ ಬ್ರೇಕ್ ಹಾಕುವಂತೆ ಜೈಲು ಸಿಬ್ಬಂದಿಗೆ ಖಡಕ್ ಎಚ್ಚರಿಕೆ ನೀಡಿದ್ದರು. ಯಾವುದೇ ರೀತಿಯ ಅಕ್ರಮ ಮುಂದುವರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಕೂಡಾ ಅವರು ಸ್ಪಷ್ಟಪಡಿಸಿದ್ದರು. ಈ ಎಚ್ಚರಿಕೆಯ ನಂತರ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು, ಬ್ಯಾರಕ್‌ಗಳ ಮೇಲೆ ಏಕಾಏಕಿ ದಾಳಿ ನಡೆಸಿ ಪರಿಶೀಲನೆ ಆರಂಭಿಸಿದ್ದಾರೆ.

ಕೈದಿಗಳು ಅಡಗಿಸಿಟ್ಟಿದ್ದ ಮೊಬೈಲ್, ಸಿಮ್ ಕಾರ್ಡ್ ಹಾಗೂ ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೈಲಿನೊಳಗೆ ಮೊಬೈಲ್ ಬಳಕೆ ಸಂಪೂರ್ಣ ನಿಷೇಧವಾಗಿದ್ದರೂ, ಅಕ್ರಮವಾಗಿ ಈ ಸಾಧನಗಳು ಹೇಗೆ ಒಳಗೆ ತಲುಪುತ್ತಿವೆ ಎಂಬುದು ಗಂಭೀರ ಪ್ರಶ್ನೆ ಉದ್ಭವಿಸಿದೆ.

ಇನ್ನು ಅಕ್ರಮ ಹಣ ವ್ಯವಹಾರಕ್ಕೂ ಜೈಲಿನಲ್ಲಿ ಬ್ರೇಕ್ ಹಾಕಲಾಗುತ್ತಿದೆ. ಜನವರಿ 23ರಂದು ಕೈದಿಯೊಬ್ಬನನ್ನು ಭೇಟಿಯಾಗಲು ಬಂದ ಮಹಿಳೆಯೊಬ್ಬರು, ಅಕ್ರಮವಾಗಿ ಹಣ ನೀಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಅನುಷಾ ಎಂಬ ಮಹಿಳೆ, ಕೈದಿ ಸೋಮಶೇಖರ್ ಎಂಬಾತನನ್ನು ಭೇಟಿಯಾಗಲು ಜೈಲಿಗೆ ಬಂದಿದ್ದರು. ಸಂದರ್ಶನದ ವೇಳೆ ಗಾಜಿನ ಕೆಳಭಾಗದಲ್ಲಿದ್ದ ಸಣ್ಣ ರಂಧ್ರದ ಮೂಲಕ ಹಣ ನೀಡಲು ಮುಂದಾಗುತ್ತಿದ್ದಂತೆ, ಎಚ್ಚರಿಕೆಯಿಂದಿದ್ದ ಜೈಲು ಸಿಬ್ಬಂದಿ ಅವರನ್ನು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಅವರ ಬಳಿ ಇದ್ದ 22,000 ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಜಿಪಿ ಅಲೋಕ್ ಕುಮಾರ್ ಅವರ ಕಟ್ಟುನಿಟ್ಟಿನ ನಿರ್ದೇಶನದ ಹಿನ್ನೆಲೆಯಲ್ಲಿ ಜೈಲಿನ ಎಲ್ಲಾ ಟವರ್ ಹಾಗೂ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ನಿಷೇಧಿತ ವಸ್ತು, ಹಣ ಅಥವಾ ಸಂವಹನ ಸಾಧನಗಳು ಕೈದಿಗಳ ಕೈ ಸೇರದಂತೆ ತಡೆಯುವ ನಿಟ್ಟಿನಲ್ಲಿ ಹಂತ ಹಂತವಾಗಿ ದಾಳಿ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version